ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ : 106 ಮಂದಿಗೆ ಹೈಕೋರ್ಟ್ ಜಾಮೀನು
ಬೆಂಗಳೂರು: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 106 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮುಹಮ್ಮದ್ ಆರೀಫ್ ರಿಝ್ವಿ ಸೇರಿದಂತೆ 106 ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಎಲ್ಲ ಅರ್ಜಿದಾರರು ವಿಚಾರಣಗೆ ತಪ್ಪದೇ ಹಾಜರಾಗಬೇಕು. ರವಿವಾರ ಠಾಣೆಗೆ ಬಂದು ಸಹಿ ಹಾಕಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ಒಬ್ಬರು ಶ್ಯೂರಿಟಿ ಮತ್ತು 2 ಲಕ್ಷ ರೂ.ಗಳ ಬಾಂಡ್ ನೀಡಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ತುಲ್ಲಾ ಕೊತ್ವಾಲ್, ಇದೇ ಪ್ರಕರಣದದಲ್ಲಿ ಆರೋಪಿಗಳಾಗಿದ್ದ 35 ಮಂದಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಆದ್ದರಿಂದ ಅರ್ಜಿದಾರರಿಗೂ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2022ರ ಎಪ್ರಿಲ್ 16ರಂದು ಹುಬ್ಬಳ್ಳಿಯಲ್ಲಿ ವಾಟ್ಸ್‌ಆ್ಯಪ್ ಸ್ಟೇಟಸ್ ವಿಚಾರವಾಗಿ ಆರಂಭಗೊಂಡಿದ್ದ ಗಲಾಟೆ, ವಿಕೋಪಕ್ಕೆ ತಿರುಗಿತ್ತು. ಪೊಲೀಸ್ ಠಾಣೆ ಎದುರು ಜಮಾಯಿಸಿ ಕಲ್ಲು ತೂರಾಟ ಮಾಡಲಾಗಿತ್ತು. ಅಲ್ಲದೆ, ಪೊಲೀಸ್ ಠಾಣೆ , ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿತ್ತು.