ಹುಬ್ಬಳ್ಳಿ | ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ, ವೀಡಿಯೊ ವೈರಲ್; ಐವರು ಪೊಲೀಸ್ ವಶಕ್ಕೆ

Update: 2023-07-11 11:44 GMT

 ಸಂತೋಶ್ ಬಾಬು- ಹಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರ್

ಹುಬ್ಬಳ್ಳಿ: ಯುವಕನೊಬ್ಬನನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಐದು ಜನರನ್ನು ಹುಬ್ಬಳ್ಳಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಹಲ್ಲೆಗೈದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ಹಲ್ಲೆಗೊಳಗಾದ ಯುವಕನನ್ನು ಸಂದೀಪ್ ಎಂದು ಗುರುತಿಸಲಾಗಿದ್ದು, ಈತ ಇನ್ಸ್‌ಟಾಗ್ರಾಂನಲ್ಲಿ ಕೆಟ್ಟದಾಗಿ ಬೈದು ರೀಲ್ಸ್ ಮಾಡಿ ಹಾಕಿದ್ದ ಎಂದು ಆರೋಪಿಸಿ ಆತನ ಸ್ನೇಹಿತರೇ ಆದ  ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್,ಮಂಜು​ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಯುವಕನ ಬಟ್ಟೆ ತೆಗೆಸಿ, ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಲ್ಲದೇ ಅಮಾನುಷವಾಗಿ ಹಲ್ಲೆ ಮಾಡಿದ್ದು, ಯುವಕ ಕೈ ಮುಗಿದು ಬೇಡಿಕೊಂಡರೂ ಹಲ್ಲೆ ನಡೆಸುವುದು ವಿಡಿಯೋದಲ್ಲಿ ದಾಖಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರ್ ಸಂತೋಶ್ ಬಾಬು,' ಎರಡು ವಿಡಿಯೋಗಳು ನಮ್ಮ ಗಮನಕ್ಕೆ ಬಂದಿದೆ. ಇದು ಮೂರು ನಾಲ್ಕು ತಿಂಗಳ ಹಿಂದೆ ನಡೆದ ಘಟನೆ‌ಯಾಗಿದ್ದು, ಸಂದೀಪ್ ಇನ್ ಸ್ಟಾ ಗ್ರಾಂನಲ್ಲಿ ಕೆಟ್ಟದಾಗಿ ಬೈತಿದ್ದ ಎಂದು ಹಲ್ಲೆ ಮಾಡಿದ್ದಾರೆ. ಇದುವೆರಗೂ ಸಂದೀಪ್ ದೂರು ಕೊಟ್ಟಿಲ್ಲ. ಆದರೆ ವೀಡಿಯೊ ಆಧರಿಸಿ ಹಲ್ಲೆ ನಡೆಸಿರುವ ಒಟ್ಟು ಐದು ಜನರನ್ನು ವಶಕ್ಕೆ ಪಡೆಯಲಾಗಿದೆ. ಸಂದೀಪ್ ಗಾಗಿ ಹುಡುಕಾಟ ನಡೆಯುತ್ತಿದೆ' ಎಂದು ಮಾಹಿತಿ ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News