‘ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯ’ ; ದೇಶಪ್ರೇಮದ ಪಾಠ ಬೇರೆಯವರಿಂದ ಕಲಿಯುವ ಅಗತ್ಯವಿಲ್ಲ: ನಾಸಿರ್ ಹುಸೇನ್

Update: 2024-02-28 12:19 GMT

ಬೆಂಗಳೂರು : ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯ. ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಪಾಠವನ್ನು ಬೇರೆಯವರಿಂದ ಕಲಿಯುವ ಅಗತ್ಯ ನನಗಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ರಾಜ್ಯಸಭಾ ಚುನಾವಣೆಯಲ್ಲಿ ಅವರು ಹೀನಾಯವಾಗಿ ಸೋತಿದ್ದಾರೆ. ಬಿಜೆಪಿ-ಜೆಡಿಎಸ್ ಎರಡು ಪಕ್ಷಗಳು ಒಂದಾಗಿ ಸೇರಿ ಕರ್ನಾಟಕದಲ್ಲಿ ಮತ್ತೊಂದು ಸ್ಥಾನವನ್ನು ಗೆಲ್ಲಲು ಪ್ರಯತ್ನಪಟ್ಟಿದ್ದರು. ಆದರೆ, ಅವರ ಎಲ್ಲ ಪ್ರಯತ್ನಗಳು ವಿಫಲವಾಯಿತು ಎಂದು ಟೀಕಿಸಿದರು.

ನಿನ್ನೆ(ಮಂಗಳವಾರ) ವಿಧಾನಸಭೆಯಲ್ಲಿ ರಾಜ್ಯಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ನನ್ನ ಗೆಲುವನ್ನು ಸಂಭ್ರಮಿಸುತ್ತಾ ಬೆಂಬಲಿಗರು ‘ನಾಸಿರ್ ಸಾಬ್ ಜಿಂದಾಬಾದ್’ ಎಂದು ಕೂಗುತ್ತಿದ್ದರು. ಒಂದು ವೇಳೆ ಯಾರಾದರೂ ಅಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರೆ, ಅದನ್ನು ನಾನು ಕೇಳಿಸಿಕೊಂಡಿದ್ದರೆ ಆತನನ್ನು ನಾನೇ ಜೈಲಿಗೆ ಅಟ್ಟುವಂತೆ ಮಾಡುತ್ತಿದೆ ಎಂದು ನಾಸಿರ್ ಹುಸೇನ್ ತಿಳಿಸಿದರು.

ಸ್ಥಳದಲ್ಲಿ ನೂರಾರು ಮಂದಿ ಪತ್ರಕರ್ತರು ಇದ್ದರು. ನಾನು 10-15 ಜನ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದೆ. ಯಾರೊಬ್ಬರೂ ಈ ಬಗ್ಗೆ ನನಗೆ ಪ್ರಶ್ನೆ ಮಾಡಿಲ್ಲ. ಅದರಲ್ಲಿ ಒಬ್ಬರು ಮಾತ್ರ ನನ್ನನ್ನು ಪ್ರಚೋದಿಸಿ, ತಳ್ಳುತ್ತಿದ್ದರು. ನಾನು ನನ್ನ ಬೆಂಬಲಿಗರಿಗೆ ಆತನನ್ನು ಹಿಂದಕ್ಕೆ ಸರಿಯುವಂತೆ ಸೂಚಿಸಿದೆ. ಈ ವೇಳೆ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಲ್ಲಿದ್ದ ಬೇರೆ ಯಾವ ಪತ್ರಕರ್ತರಿಗೂ ಆ ಘೋಷಣೆ ಕೇಳಿಸಲಿಲ್ಲ. ಯಾವೊಬ್ಬರೂ ಅದನ್ನು ರೆಕಾರ್ಡ್ ಮಾಡಿಲ್ಲ ಎಂದು ಅವರು ಹೇಳಿದರು.

ಅಷ್ಟೇ ಅಲ್ಲ, ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಸುಮಾರು ಒಂದು ಗಂಟೆಗಳ ಕಾಲ ನಾನು ವಿಧಾನಸೌಧದಲ್ಲೆ ಇದ್ದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಮಾಣಪತ್ರವನ್ನು ಪಡೆದುಕೊಂಡು ನಾನು ನನ್ನ ಕಚೇರಿಗೆ ಬಂದ ನಂತರ ಕೆಲವು ಮಾಧ್ಯಮದವರು ನನಗೆ ಕರೆ ಮಾಡಿ, ಈ ರೀತಿಯ ಘಟನೆಯಾಗಿದೆ, ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ನಿಮ್ಮ ಹೇಳಿಕೆ ಬೇಕು ಎಂದು ಕೇಳಿದರು. ನಾನು ಅವರನ್ನು ಬರಲು ಹೇಳಿ ಪ್ರತಿಕ್ರಿಯೆ ನೀಡಿದ್ದೇನೆ ಎಂದು ನಾಸಿರ್ ಹುಸೇನ್ ತಿಳಿಸಿದರು.

ವಿಧಾನಸೌಧಕ್ಕೆ ಯಾರೆಲ್ಲ ನಮ್ಮ ಬೆಂಬಲಿಗರು ಬಂದಿದ್ದರೋ ಅವರ ಪಟ್ಟಿ ನಮ್ಮ ಬಳಿಯಿದೆ. ಅವರ ಪೈಕಿ ಯಾರಾದರೂ ಈ ಕೃತ್ಯ ಎಸಗಿದ್ದರೆ ನೆಲದ ಕಾನೂನಿನಂತೆ ಕ್ರಮ ಆಗಲಿ. ಆದರೆ, ಕೆಲವು ಮಾಧ್ಯಮಗಳ ಕ್ಯಾಮರಗಳಲ್ಲಿ ರೆಕಾರ್ಡ್ ಆಗಿರುವ ದೃಶ್ಯಗಳನ್ನು ನಾನು ನೋಡಿದೆ ಅದರಲ್ಲಿ ಎಲ್ಲಿಯೂ ಆ ಘೋಷಣೆ ಕೂಗಿರುವುದು ಕೇಳಿಸಲಿಲ್ಲ. ಬಹುಶಃ ಆ ವಿಡಿಯೋವನ್ನು ತಿರುಚಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಅದು ತುಂಬಾ ಪ್ರೀತಿಯ ಘೋಷಣೆ. ಯಾರು ವಿಡಿಯೋ ತಿರುಚಿದ್ದಾರೋ, ಯಾರು ಆ ವಿಡಿಯೋವನ್ನು ಹಂಚಿದ್ದಾರೋ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಅಲ್ಲದೆ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಾಸಿರ್ ಹುಸೇನ್ ಆಗ್ರಹಿಸಿದರು.

‘ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒಬ್ಬ ಹಿರಿಯ ರಾಜಕೀಯ ನಾಯಕ. ವಿಷಯಕ್ಕೆ ಸಂಬಂಧಿಸಿದಂತೆ ಮೊದಲು ಸರಿಯಾಗಿ ಮಾಹಿತಿಯನ್ನು ಸಂಗ್ರಹಿಸಿಕೊಂಡು ಸದನದ ಒಳಗೆ ಮಾತನಾಡಲಿ. ಅದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ’

ಸೈಯದ್ ನಾಸಿರ್ ಹುಸೇನ್, ರಾಜ್ಯಸಭಾ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News