ಅಸ್ಮಿತೆ, ಸಂಸ್ಕೃತಿಗೆ ಅನುಗುಣವಾಗಿ 'ಕರ್ನಾಟಕ ರಾಜ್ಯ ಶಿಕ್ಷಣ ನೀತಿ' ಅನುಷ್ಠಾನ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ಅಸ್ಮಿತೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ, ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡನ್ನು ಸಿದ್ಧಪಡಿಸಲು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಲಾಗಿದೆ. ಆಯೋಗವು ಶೀಘ್ರದಲ್ಲಿಯೇ ವರದಿಯನ್ನು ಸಲ್ಲಿಸಲಿದ್ದು, ಅದರಂತೆ ಪರಿಶೀಲಿಸಿ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
2024-25ನೇ ಸಾಲಿನ ಬಜೆಟ್ ನಲ್ಲಿ ಉನ್ನತ ಶಿಕ್ಷಣಕ್ಕೆ ನೀಡಿರುವ ಕೊಡುಗೆಗಳು ಇಂತಿವೆ
► ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಆದ್ಯತೆ ನೀಡುತ್ತಾ ಬಂದಿದೆ. ಹಿಂದಿನ ಅಧಿಕಾರಾವಧಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವ ಮಹತ್ತರ ತೀರ್ಮಾನವನ್ನು ಕೈಗೊಂಡಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದಿಡುತ್ತಾ ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಗಳ ಉನ್ನತೀಕರಣಕ್ಕಾಗಿ ಒಟ್ಟು 30 ಕೋಟಿ ರೂ. ಅನುದಾನ ಒದಗಿಸಲಾಗುವುದು.
► 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕಾಮಗಾರಿಗಳಿಗೆ 250 ಕೋಟಿ ರೂ. ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಕಾಮಗಾರಿಗಳಿಗೆ 120 ಕೋಟಿ ರೂ. ಅನುದಾನ ಒದಗಿಸಲಾಗುವುದು. ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಅಗತ್ಯತೆಗನುಗುಣವಾಗಿ ತುಂಬಲಾಗುವುದು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುವುದು.
► ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು.
► ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು (UVCE) 500 ಕೋಟಿ ರೂ. ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ 100 ಕೋಟಿ ರೂ. ಅನುದಾನ ಒದಗಿಸಲಾಗುವುದು. ಜೊತೆಗೆ ಸಿ.ಎಸ್.ಆರ್. ನಿಧಿ ಮತ್ತು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ನೀಡುವ ದೇಣಿಗೆ ಮೂಲಕ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುವುದು.
► ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಲು ಬೇರು-ಚಿಗುರು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
► ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ಪಡೆದುಕೊಳ್ಳಲು ಅಗತ್ಯವಾದ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಲು 10 ಕೋಟಿ ರೂ.ಗಳCorpus Fund ಸ್ಥಾಪಿಸಲಾಗುವುದು.
► ವಿಷಯ ತಜ್ಞರು, ನಾಗರಿಕ ಸೇವಾ ಅಧಿಕಾರಿಗಳು ಮತ್ತು ಉದ್ಯಮಿಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರೇರಣಾ ಎಂಬ ಕಾರ್ಯಕ್ರಮದಡಿ ಮಾರ್ಗದರ್ಶನವನ್ನು (Mentorship) ನೀಡಲಾಗುವುದು.
► ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡವನ್ನು 54 ಕೋಟಿ ರೂ. ವೆಚ್ಚದಲ್ಲಿ ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣವನ್ನು 116 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.