BMTC ಘಟಕ‌ 4ರಲ್ಲಿ "ಗಾಂಧಿ ಪಾಂಯಿಂಟ್‌" ಕ್ಯಾಂಟೀನ್‌ ಆರಂಭ

Update: 2023-10-03 06:08 GMT

ಬೆಂಗಳೂರು, ಅ.3: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಗಾಂಧಿ ಜಯಂತಿ ದಿನ ತನ್ನ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. ರಿಯಾಯಿತಿ ದರದಲ್ಲಿ ಶುಚಿ, ರುಚಿಯಾದ ಊಟ-ಉಪಹಾರ ಒದಗಿಸುವ ಗಾಂಧಿ ಪಾಯಿಂಟ್ ಕ್ಯಾಂಟಿನ್ ಆರಂಭಿಸಿದೆ.

ಬಿಎಂಟಿಸಿ ಘಟಕ 4ರಲ್ಲಿ ಸೋಮವಾರ ಮಹಾತ್ಮ ಗಾಂಧಿ ಜಯಂತಿಯನ್ನು ಸರಳ, ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ತಿಂಡಿ ಮತ್ತು ಊಟ ಒದಗಿಸಲು ಗಾಂಧಿ ಪಾಯಿಂಟ್ ಹೆಸರಿನ ಕ್ಯಾಂಟಿನ್ ಆರಂಭಿಸಲಾಗಿದೆ.

ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕ್ಯಾಂಟೀನ್‍ಗೆ ಚಾಲನೆ ನೀಡಿದರು. ಸ್ವತಂತ್ರ ಆಹಾರದ ಸೇವೆ ಹೆಸರಿನ ಟ್ಯಾಗ್‍ಲೈನ್ ಹೊಂದಿದ ಗಾಂಧಿ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವರು, "ಈಗಾಗಲೇ ಬಿಎಂಟಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವುದರಿಂದ ನಾಲ್ಕೂ ಸಾರಿಗೆ ಸಂಸ್ಥೆಗಳ ಚಾಲನಾ ಸಿಬ್ಬಂದಿಗೆ ಬಹಳ ಅನುಕೂಲವಾಗಲಿದೆ. ಉತ್ತಮ ಗುಣಮಟ್ಟದ ಆಹಾರ ರಿಯಾಯಿತಿ ದರದಲ್ಲಿ ದೊರಕಲಿದೆ. ಇದೇ ರೀತಿ ಇತರೆ ಘಟಕಗಳಲ್ಲಿಯೂ ಕ್ಯಾಂಟೀನ್ ಪ್ರಾರಂಭಿಸಲು ಸೂಚನೆ ನೀಡಲಾಗಿದೆ" ಎಂದರು.

ಸಾರಿಗೆ ನಿಗಮದ ಸಿಬ್ಬಂದಿಗೆ ಕೋಟಿ ರೂ.ಗಳ ಅಪಘಾತ ವಿಮೆ ಮಾಡಿಸುವ ಮೂಲಕ ನೌಕರರ ಹಿತರಕ್ಷಣೆಗೆ ಮುಂದಾಗಿ ಸಿಬ್ಬಂದಿಯ ಪ್ರಶಂಸೆಗೆ ಪಾತ್ರವಾಗಿದ್ದ ಬಿಎಂಟಿಸಿ, ಇದೀಗ ಅಲ್ಪದರಕ್ಕೆ ಊಟ ಉಪಹಾರ ಒದಗಿಸುವ ಮೂಲಕ ಮತ್ತಷ್ಟ ಮನ್ನಣೆ ಗಳಿಸಿ ನೌಕರಸ್ನೇಹಿ ವಾತಾವರಣ ಸೃಷ್ಟಿಸುತ್ತಿದೆ. ಸಮಾರಂಭದಲ್ಲಿ ಬಿಎಂಟಿಸಿ ದಕ್ಷಿಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೀರ್ತಿಚಂದ್ರ, ಜಯನಗರ ಘಟಕ 4ರ ಘಟಕ ವ್ಯವಸ್ಥಾಪಕ ರವೀಂದ್ರ ಹಾಗೂ ಘಟಕದ ಸಿಬ್ಬಂದಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News