ಸಂಸತ್ ದಾಳಿ ಪ್ರಕರಣದ ತನಿಖೆ; ಮೈಸೂರಿಗೆ ಬಂದ ದಿಲ್ಲಿ ಪೊಲೀಸರು

Update: 2023-12-18 15:38 GMT

ಮೈಸೂರು: ಸಂಸತ್ ಭವನದೊಳಗೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ಮೈಸೂರಿನ ಮನೋರಂಜನ್ ನಿವಾಸಕ್ಕೆ ದಿಲ್ಲಿ ಪೊಲೀಸರು ಸೋಮವಾರ ಬೇಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬದವರ ವಿಚಾರಣೆ ನಡೆಸಿದ್ದಾರೆ.

ವಿಜಯನಗರದ 2ನೇ ಹಂತದಲ್ಲಿರುವ ಮನೋರಂಜನ್ ಮನೆಗೆ ದೆಹಲಿಯ ಮಹಿಳಾ ಪೊಲೀಸ್ ಸೇರಿದಂತೆ ಮೂವರು ಜನರ ತಂಡ ಭೇಟಿ ನೀಡಿ ಮನೆಯನ್ನು ತಪಾಸಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಇದರ ಜೊತೆಗೆ ಮನೋರಂಜನ್ ಕೊಠಡಿಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಪುಸ್ತಕ ಸೇರಿದಂತೆ ಮನೋರಂಜನ್ ಬಳಸುತ್ತಿದ್ದ ವಸ್ತುಗಳನ್ನು ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದಿಲ್ಲಿ ಪೊಲೀಸರು ಆಗಮಿಸಿದ ವೇಳೆ ಮನೋರಂಜನ್ ತಂದೆ ಡಿ.ದೇವರಾಜೇಗೌಡ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಮನೋರಂಜನ್ ತಾಯಿ ಶೈಲಜಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮನೆಗೆ ಆಗಮಿಸಿದ ದೇವರಾಜೇಗೌಡ ಅವರನ್ನು ವಿಚಾರಣೆ ನಡೆಸಿದರು ಎನ್ನಲಾಗಿದೆ.

ಮನೋರಂಜನ್ ಮನೆಯ ಬಳಿ ವಿಜಯನಗರ ಠಾಣೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.ಕಳೆದ ಬುಧವಾರ ಲೋಕಸಭಾ ಅಧಿವೇಶನ ನಡೆಯುವ ಸಂದರ್ಭ ದುಷ್ಕರ್ಮಿಗಳು ಸಂಸತ್ ಭವನದೊಳಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ್ದರು. ಈ ಪ್ರಕರಣ ಸಂಬಂಧ ಒಟ್ಟು 7 ಮಂದಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಕೇಂದ್ರ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು, ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಈ ನಡುವೆ ತನಿಖೆ ತೀವ್ರಗೊಳಿಸಿರುವ ಗುಪ್ತಚರ ಇಲಾಖೆಯ ಅಧಿಕಾರಿಗಳು, ಮನೋರಂಜನ್ ಬ್ಯಾಂಕ್ ಖಾತೆ, ಆತನ ಫೋನ್‍ಗೆಕಾಲ್ ಡಿಟೇಲ್ಸ್ ಹಾಗೂ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಜೊತೆ ಆತ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿರುವ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಮನೋರಂಜನ್ ಹಾಗೂ ಆತನ ಕುಟುಂಬದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News