ಬಿಜೆಪಿ ಅವಧಿಯ ಹಗರಣಗಳ ತನಿಖೆ, ತಪ್ಪು ಮಾಡಿದವರು ಜೈಲಿಗೆ : ಸಿಎಂ ಸಿದ್ದರಾಮಯ್ಯ

Update: 2024-07-19 15:30 GMT

ಬೆಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಮಾಡಿಸಿ, ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಬಗೆದಷ್ಡು ಲೆಕ್ಕ ಹಾಕದಷ್ಡು ಹಗರಣಗಳಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 42.16 ಕೋಟಿ ರೂ. ಎಪಿಎಂಸಿ ಹಗರಣವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಮಂತ್ರಿಯಾಗಿದ್ದಾಗ ಭೋವಿ ನಿಗಮದಲ್ಲಿ 87 ಕೋಟಿ ರೂ. ಹಗರಣವಾಗಿದೆ ಎಂದರು.

ಇನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್‍ನಲ್ಲಿ 47.10 ಕೋಟಿ ರೂ. ಹಗರಣವಾಗಿತ್ತು. ಅದಕ್ಕೆ ಅಧ್ಯಕ್ಷರಾಗಿದ್ದ ವೀರಯ್ಯ ಬಂಧನವಾಗಿದ್ದರೂ ನಾಚಿಕೆ ಆಗಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಬೇರೆ ನಿಗಮಗಳಲ್ಲಿ 437 ಕೋಟಿ ರೂ. ಹಗರಣವಾಗಿದೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಚಿವರಾಗಿದ್ದಾಗ ಕಿಯೋನಿಕ್ಸ್‌ ನಲ್ಲಿ 500 ಕೋಟಿ ರೂ. ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಬಿಜೆಪಿ ಅವಧಿಯಲ್ಲಿನ ಹಗರಣದ ಬಗ್ಗೆ ಸಿಐಡಿ ತನಿಖೆಯಲ್ಲಿ ಉಲ್ಲೇಖವಾಗಿದೆ. ಕೋವಿಡ್ ಸಂದರ್ಭದಲ್ಲಿ 40ಸಾವಿರ ಕೋಟಿ ರೂ.ಹಗರಣವಾಗಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಹಗರಣದ ಬಗ್ಗೆ ಎಚ್.ವಿಶ್ವನಾಥ್ ಹೇಳಿದ್ದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ. ಆಗ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ, ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಗೆ ನೂರಾರು ಕೋಟಿ ರೂ. ಆದಾಯವಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬಿಜೆಪಿಯವರು ಯಾವತ್ತಿಗೂ ಸಾಮಾಜಿಕ ನ್ಯಾಯದ ಪರವಾಗಿಲ್ಲ. ಇವರಿಗೆ ಯಾವತ್ತಾದರೂ ಎಸ್‍ಸಿ, ಎಸ್‍ಟಿ ವರ್ಗದವರ ಮೇಲೆ ಕಾಳಜಿ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು: ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರಾಗಿದ್ದಾರೆ. ನಮ್ಮ ಹಗರಣಗಳು ಬಿಚ್ಚಬಾರದು ಎಂದು ಸದನದಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇಷ್ಟು ಕೆಟ್ಟದಾಗಿ ಪ್ರತಿಪಕ್ಷಗಳು ನಡೆದುಕೊಂಡಿಲ್ಲ. ಕೇಂದ್ರ ಹಾಗೂ ಆರೆಸ್ಸೆಸ್ ಸೂಚನೆಯಿಂದ ಈ ರೀತಿ ಮಾಡುತ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಗಲಾಟೆ ಮಾಡುತ್ತಿದ್ದಾರೆ. ಇವರು ಉತ್ತರ ಕೇಳಬಾರದು ಎಂದು ದುರದ್ದೇಶದಿಂದ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News