ಕೇಂದ್ರ ಹಣಕಾಸು ಆಯೋಗದ ಸ್ವಾಯತ್ತತೆ ಎಂಬುದು ಕೇವಲ ತೋರಿಕೆಯೇ? : ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿಧಿ ಹಂಚಿಕೆಯ ತಾರತಮ್ಯದ ಆರೋಪವನ್ನು ‘‘ರಾಜಕೀಯ ಕುಚೋದ್ಯದ ಆರೋಪಗಳಾಗಿವೆ’’ ಎಂದು ಸಂಸತ್ತಿನಲ್ಲಿ ಹೇಳಿರುವುದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ತಮ್ಮ x ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, “ಹಣಕಾಸು ಆಯೋಗದ ಶಿಫಾರಸುಗಳ ಪಾವಿತ್ರ್ಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಹಣಕಾಸು ಆಯೋಗದ ಮೇಲೆ ಪ್ರಭಾವ ಬೀರುವ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿರುವ ಬಗ್ಗೆ ನೀತಿ ಆಯೋಗದ ಸಿಇಓ ಬಹಿರಂಗಪಡಿಸಿರುವ ವಿಷಯಗಳು, ವಿಭಿನ್ನವಾದ ಚಿತ್ರಣವನ್ನು ನೀಡುತ್ತವೆ. ಹಣಕಾಸು ಆಯೋಗದ ಸಲಹೆಯ ಹೊರತಾಗಿಯೂ ಕರ್ನಾಟಕಕ್ಕೆ 5,595 ಕೋಟಿ ರೂ.ಗಳ ವಿಶೇಷ ಅನುದಾನದ ನಿರಾಕರಣೆ, ಕ್ಷೀಣಿಸುತ್ತಿರುವ ನೆರವಿನ ಅನುದಾನ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಬಜೆಟ್ ಅನುದಾನ ಬಾರದೇ ಇರುವುದು, ಇವೆಲ್ಲವೂ ಭಾರತದಲ್ಲಿ ಹಣಕಾಸು ಆಯೋಗದ ಸ್ವಾಯತ್ತೆಯೆಂಬುದು ಕೇವಲ ತೋರಿಕೆಗೆ ಮಾತ್ರವೇ? ಎಂಬ ಪ್ರಶ್ನೆಯೆಡೆಗೆ ಕೊಂಡೊಯ್ಯುತ್ತದೆ” ಎಂದು ತಿಳಿಸಿದ್ದಾರೆ.
ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ನಿಧಿ ಹಂಚಿಕೆಯ ವೇಳೆ ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದರು. ಈ ಸಂಬಂಧ ಕರ್ನಾಟಕ ಸರಕಾರ ಮಾಡಿರುವ ಆರೋಪಗಳು ‘‘ರಾಜಕೀಯ ಕುಚೋದ್ಯದ ಆರೋಪಗಳಾಗಿವೆ’’ ಎಂದು ಹೇಳಿದ್ದರು.
‘‘ಕೆಲವು ರಾಜ್ಯಗಳ ವಿರುದ್ಧ ತಾರತಮ್ಯ ನಡೆಸಲಾಗುತ್ತಿದೆ ಎಂಬ ಆರೋಪವು ರಾಜಕೀಯ ಪ್ರೇರಿತವಾಗಿದೆ. ಸ್ಥಾಪಿತ ಹಿತಾಸಕ್ತಿಗಳು ಹೀಗೆ ಹೇಳಿಕೊಂಡು ತಿರುಗಲು ಸಂತೋಷಪಡುತ್ತಿವೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ಇಲ್ಲಿ ಸರಿಯಾದ ವ್ಯವಸ್ಥೆಯಿರುವುದರಿಂದ ಇಂಥ ಪರಿಸ್ಥಿತಿ ಉಂಟಾಗಲು ಸಾಧ್ಯವಿಲ್ಲ. ಕೇಂದ್ರ ಸರಕಾರವು ಹಣಕಾಸು ಆಯೋಗದ ಶಿಫಾರಸುಗಳಂತೆ ಕಾರ್ಯನಿರ್ವಹಿಸುತ್ತಿದೆ ’’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.