ಜಾತಿ ದೌರ್ಜನ್ಯ ತಡೆಗೆ ‘ಜೈ ಭೀಮ್ ರಕ್ಷಣಾ ವೇದಿಕೆ’ ಅಸ್ತಿತ್ವಕ್ಕೆ

Update: 2024-07-08 18:20 GMT

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮಗಳ ತಾರತಮ್ಯ ಮಿತಿ ಮೀರಿದೆ. ಆಹಿನ್ನೆಲೆಯಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ದೌರ್ಜನ್ಯ ತಡೆಗಟ್ಟಿ, ನೊಂದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ನೂತನವಾಗಿ ‘ಕರ್ನಾಟಕ ಜೈ ಭೀಮ್ ರಕ್ಷಣಾ ವೇದಿಕೆ’ ಆರಂಭಿಸಲಾಗುತ್ತಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ಜಯಕುಮಾರ್ ಹೇಳಿದ್ದಾರೆ.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕಿದ್ದ ಸರಕಾರಗಳು, ಶಿಕ್ಷಣ ಖಾಸಗಿಕರಣ ಮಾಡಿ ಹಣ ಇದ್ದವರಿಗೆ ಮಾತ್ರ ಕಲಿಕೆ ಎಂಬಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳು ಸಿಗುತ್ತಿಲ್ಲ, ಮಕ್ಕಳಿಗೆ ಸಮವಸ್ತ್ರ, ಪಠ್ಯ-ಪುಸ್ತಕಗಳು ಸಮಯಕ್ಕೆ ಸಿಗದೆ ಪರದಾಡುವಂತೆ ಮಾಡಿದ್ದಾರೆಂದು ದೂರಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಶೋಷಣೆ ಇನ್ನೂ ಮುಂದುವರೆಯುತ್ತಲೆ ಇದೆ. ಮೀಸಲಾತಿ ಸಂಪೂರ್ಣ ಜಾರಿ ಮಾಡದೆ ಅನ್ಯಾಯ ಮಾಡುತ್ತಿದ್ದಾರೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಎಸ್‍ಸಿಎಸ್‍ಪಿ/ಟಿಎಸ್‍ಪಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ನಾನು ಈ ಹಿಂದೆ ಹಲವು ಸಂಘಟನೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಎಲ್ಲಿಯೂ ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಇದೀಗ ನನ್ನ ಬೆಂಬಲಿಗರೊಂದಿಗೆ ಸಮಾಜಕ್ಕೆ ನನ್ನದೆ ಆದ ಕೊಡುಗೆ ಕೊಡಬೇಕೆಂಬ ಆಶಯದೊಂದಿಗೆ ನೂತನ ಸಂಘಟನೆ ಪ್ರಾರಂಭ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಶೋಕ್, ಪದಾಧಿಕಾರಿಗಳಾದ ಬಿ.ಟಿ.ಶಿವಕುಮಾರ್, ಪ್ರಶಾಂತ್, ಸಜ್ಜನ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಹಾಗೂ ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಆರ್.ಕಿರಣ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News