ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ: ಸಚಿವ ಝಮೀರ್ ಅಹ್ಮದ್ ರಾಜೀನಾಮೆಗೆ ಜೆಡಿಎಸ್ ಆಗ್ರಹ
ಬೆಂಗಳೂರು: ‘ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಸಚಿವ ಝಮೀರ್ ಅಹ್ಮದ್ ಖಾನ್ ಜನಾಂಗೀಯ ನಿಂದನೆ ಮಾಡಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು, ‘ಕಾಲಾ ಕುಮಾರಸ್ವಾಮಿ’ (ಕರಿಯ ಕುಮಾರಸ್ವಾಮಿ)ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ’ ಎಂದು ಆರೋಪಿಸಿರುವ ಜೆಡಿಎಸ್, ‘ಝಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದೆ.
ಸೋಮವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಜೆಡಿಎಸ್, ‘ಝಮೀರ್ ಅವರು ಆ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಲ್ಲದೆ, ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಜೋದಿಸಿರುವ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ ಅಪರಾಧ’ ಎಂದು ಟೀಕಿಸಿದೆ.
‘ಈ ಕೂಡಲೇ ಗೃಹ ಸಚಿವ ಪರಮೇಶ್ವರ್, ರಾಮನಗರ ಎಸ್ಪಿ ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಝಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‍ಗೆ ನೈತಿಕತೆ ಉಳಿಸಿಕೊಂಡಿದ್ದರೇ ಮೊದಲು ಝಮೀರ್ ರಾಜೀನಾಮೆ ಪಡೆಯಬೇಕು’ ಎಂದು ಜೆಡಿಎಸ್ ಒತ್ತಾಯಿಸಿದೆ.
‘ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ಝಮೀರ್ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ. ಸೊಕ್ಕಿನ ಮಾತಿಗೆ, ಕಪ್ಪುವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ. ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಬಣ್ಣ ಯಾವುದು?, ಸಚಿವ ಡಾ.ಎಚ್.ಸಿ.ಮಹದೇವಪ್ಪರ ಬಣ್ಣ ಯಾವುದು? ಎಂದು ಪ್ರಶ್ನಿಸಿದ್ದಾರೆ. ಮನುಷ್ಯರ ಚರ್ಮ ಕಪ್ಪಾದರೇನು, ಬಿಳಿಯಾದರೇನು?’ ಎಂದು ಜೆಡಿಎಸ್ ತಿಳಿಸಿದೆ.
ಝಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ:
‘ಕುಮಾರಸ್ವಾಮಿ ನನ್ನ ಹಳೆಯ ಸ್ನೇಹಿತರು. ಹೀಗಾಗಿ ಅವರನ್ನು ಯಾವಾಗಲೂ ನಾನು ಕರಿಯಣ್ಣ ಎಂದೇ ಕರೆಯೋದು. ಅವರು ನನ್ನನ್ನು ‘ಕುಳ್ಳ’ ಎಂದು ಕರೆಯುತ್ತಾರೆ ತಾನು ಪ್ರೀತಿಯಿಂದ ಕುಮಾರಸ್ವಾಮಿಯವರನ್ನು ಹಾಗೇ ಕರೆಯುತ್ತೇನೆಯೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶವಿಲ್ಲ’
-ಝಮೀರ್ ಅಹ್ಮದ್ ಖಾನ್, ವಸತಿ ಸಚಿವ