ಸರಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿರೋಧಿಸುವ ಬಿಜೆಪಿ ನಿಲುವಿಗೆ ಮೈತ್ರಿಪಕ್ಷ ಜೆಡಿಎಸ್ ವಿರೋಧ; ವರದಿ

Photo credit: PTI
ಬೆಂಗಳೂರು: ಸರಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿರೋಧಿಸಿ ತನ್ನ ಮೈತ್ರಿ ಪಾಲುದಾರ ಬಿಜೆಪಿ ನಡೆಸುವ ಪ್ರತಿಭಟನೆಯನ್ನು ಬೆಂಬಲಿಸುವುದಿಲ್ಲ ಎಂದು ಜೆಡಿಎಸ್ ಹೇಳಿದೆ.
ಪ್ರತಿಭಟನೆಯಿಂದ ಹೊರಗುಳಿಯುವಂತೆ ಜೆಡಿಎಸ್ ನಾಯಕರು ತಮ್ಮ ಶಾಸಕರಿಗೆ ಸೂಚಿಸಿದ್ದಾರೆ ಮತ್ತು ಮಾಧ್ಯಮಗಳು ಕೇಳಿದಾಗ ಈ ನಿಲುವನ್ನು ಸ್ಪಷ್ಟಪಡಿಸುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರಿಗೆ ತಿಳಿಸಲಾಗಿದೆ ಎಂದು deccanherald.com ವರದಿ ಮಾಡಿದೆ.
ನಾವು ಪಕ್ಷದ ಸಿದ್ಧಾಂತ ಮತ್ತು ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಬೆಲೆ ಏರಿಕೆ, ಗ್ಯಾರೆಂಟಿ ಯೋಜನೆಗಳ ವೈಫಲ್ಯ, ದುರಾಡಳಿತ ಮತ್ತು ಭ್ರಷ್ಟಾಚಾರದಂತಹ ವಿಚಾರಗಳಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯನ್ನು ಬೆಂಬಲಿಸಲಿದೆ. 4 ಪ್ರತಿಶತ ಮುಸ್ಲಿಂ ಮೀಸಲಾತಿಯು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಒದಗಿಸಿದ ನೀತಿಯಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲಿಸುವುದಿಲ್ಲ ಎಂದು ಜೆಡಿಎಸ್ ಮೂಲಗಳು ದೃಢಪಡಿಸಿವೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ʼಬಿಜೆಪಿಯು ಈ ಕುರಿತು ಜೆಡಿಎಸ್ ಜೊತೆ ಮಾತುಕತೆಯನ್ನು ನಡೆಸಲಿದೆ. ಮುಸ್ಲಿಂ ಮೀಸಲಾತಿ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಬೇಕುʼ ಎಂದು ಪ್ರತಿಪಾದಿಸಿದರು.
ಮುಸ್ಲಿಂ ಮೀಸಲಾತಿ ಅಸಂವಿಧಾನಿಕ ಎಂದು ಪ್ರತಿಪಾದಿಸಿ, ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳು ಎದುರಿಸುತ್ತಿರುವ ಅನ್ಯಾಯದ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಅಭಿಯಾನವನ್ನು ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಘೋಷಿಸಿದ್ದಾರೆ. ʼನಾವು ಕಾಂಗ್ರೆಸ್ ವಿರುದ್ಧದ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ನಾವು ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇವೆ ಮತ್ತು ಶೀಘ್ರದಲ್ಲೇ ಆಂದೋಲನವನ್ನು ಕೈಗೊಳ್ಳುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.