ಜೆ.ಪಿ. ನಡ್ಡಾ ಭೇಟಿಗೆ ಸಿಗದ ಅವಕಾಶ; ಡಿ. ವಿ. ಸದಾನಂದ ಗೌಡ ಬೆಂಗಳೂರಿಗೆ ವಾಪಸ್

Update: 2023-10-28 04:34 GMT

Credit: PTI Photo

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅವರ ಆಹ್ವಾನದ ಮೇರೆಗೆ ಅಕ್ಟೋಬರ್ 25 ರಂದು ಹೊಸದಿಲ್ಲಿಗೆ ಭೇಟಿ ನೀಡಿದ್ದ ಸದಾನಂದ ಗೌಡ ಅವರಿಗೆ ಮೂರು ದಿನಗಳು ಕಾದರೂ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗದೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.‌

ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ, ʼʼಒಂದು ದಿನ ಉಳಿಯಲು ನಡ್ಡಾ ಸೂಚಿಸಿದ್ದರು. ಆದರೆ, ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಇದೆ. ಸಾಲು ಸಾಲು ಸಭೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬ್ಯುಸಿಯಾಗಿದ್ದಾರೆ. ಅಲ್ಲದೇ, ನನಗೆ ಇವತ್ತು ಪಕ್ಷದ ಕೆಲಸದ ಮೇಲೆ ತಮಿಳುನಾಡಿಗೆ ಹೋಗಬೇಕಾಗಿದ್ದರಿಂದ ದೆಹಲಿಯಿಂದ ವಾಪಸ್‌ ಬಂದೆ. ನಾವು ಪಕ್ಷದ ವ್ಯವಸ್ಥೆಗೆ ಪೂರಕವಾಗಿರಬೇಕು. ಇದನ್ನು ನಕಾರಾತ್ಮಕ ದೃಷ್ಟಿಯಿಂದ ನೋಡಬೇಕಾಗಿಲ್ಲʼʼ ಎಂದು ಸ್ಪಷ್ಟಪಡಿಸಿದರು. 

ಈ ಸಂಬಂಧ ಟ್ವೀಟ್​ ಮಾಡಿದ್ದ ಕಾಂಗ್ರೆಸ್​, ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದ ಸದಾನಂದಗೌಡರು ಮೂರು ದಿನಗಳು ಚಪ್ಪಲಿ ಸವೆಸಿದರೂ ನಡ್ಡಾ ದರ್ಶನವಾಗಲಿಲ್ಲ. ಸದಾನಂದಗೌಡರು ಮಾಜಿ ಸಿಎಂ, ಮಾಜಿ ಕೇಂದ್ರ ಮಂತ್ರಿ, ಹೀಗಿದ್ದೂ ನಯಾಪೈಸೆ ಬೆಲೆ ಕೊಡದೆ ಅವಮಾನಿಸಿದ ಬಿಜೆಪಿ ಹೈಕಮಾಂಡ್ ಕರ್ನಾಟಕದ ನಾಯಕರನ್ನು ಗುಲಾಮರು ಎಂದುಕೊಂಡಿದೆಯೇ? ಬಿಜೆಪಿ ನಾಯಕರಿಗೆ ಕಿಂಚಿತ್ ಸ್ವಾಭಿಮಾನವಿದ್ದಿದ್ದರೆ ಇಂತಹ ಗುಲಾಮಗಿರಿಗೆ ಒಡ್ಡಿಕೊಳ್ಳುತ್ತಿರಲಿಲ್ಲ. ಬಿಜೆಪಿ ನಾಯಕರಿಗೆ ಕನಿಷ್ಠ ಸ್ವಾಭಿಮಾನವಿದ್ದರೆ ಇಂತಹ ಗುಲಾಮಗಿರಿಯಿಂದ ಹೊರಬರಲಿ ಎಂದು ಟೀಕಿಸಿದೆ. 

ʼʼಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ ನೋಡದೆ ವಾಪಾಸ್ ಕಳಿಸಿದೆʼʼ

ʼಯಡಿಯೂರಪ್ಪನವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ ನೋಡದೆ ವಾಪಾಸ್ ಕಳಿಸಿದೆ. ನಾಯಕರು ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಿದ್ದರೆ ಕನಿಷ್ಠ ದೆಹಲಿ ನಾಯಕರ ಮುಖವನ್ನಾದರೂ ನೋಡುವ ಸೌಭಾಗ್ಯ ಸಿಗುತ್ತಿತ್ತೇನೋ! ಕುಮಾರಸ್ವಾಮಿಯವರಿಗೆ ಸುಲಭದಲ್ಲಿ ಸಿಗುವ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸಿಗದಿರುವುದೇಕೆ ? ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಪಕ್ಷ ನಾಯಕನ ಸ್ಥಾನ ಹಲವು ತಿಂಗಳುಗಳಿಂದ ಖಾಲಿ ಇರುವುದು ಬಿಜೆಪಿಗೆ ಗಂಭೀರ ವಿಷಯವಲ್ಲವೇ? ಯಡಿಯೂರಪ್ಪನವರು ಹಾಗೂ ಸದಾನಂದಗೌಡರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಇಂತಹವರನ್ನೇ ಅವಮಾನಿಸುತ್ತಿರುವುದರಿಂದ ಬಿಜೆಪಿಗರ ಸ್ವಾಭಿಮಾನಕ್ಕೆ ದಕ್ಕೆಯಾದಂತೆ ಅಲ್ಲವೇ? ಇಂತಹ ಅವಮಾನ, ತಿರಸ್ಕಾರಗಳಿಗೆ ಒಳಪಟ್ಟರೂ ಸಹಿಸಿಕೊಳ್ಳುತ್ತಿರುವುದು ಗುಲಾಮಗಿರಿಯ ಸಂಕೇತವಲ್ಲವೇ?ʼ 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News