ಕಲಬುರಗಿ: ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಪೊಲೀಸ್ ವಶಕ್ಕೆ
ಕಲಬುರಗಿ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ, ರೌಡಿ ಶೀಟರ್ ಮಣಿಕಂಠ ರಾಠೋಡ್‌ನನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿತ್ತಾಪುರ ಕ್ಷೇತ್ರ ವ್ಯಾಪ್ತಿಯ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರಪ್ಪ ಕೊರಬಾ ಅವರ ಸಾವಿನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಬುರಗಿಯಲ್ಲಿ ಪೊಲೀಸರು ವಶಕ್ಕೆ ಪಡೆದು ನಂತರ ಗುಣಗುರ್ತಿ ಠಾಣೆಗೆ ಕರೆದೊಯ್ದಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ಬಿಜೆಪಿ ಬಿಜೆಪಿ ನಾಯಕ ಮಣಿಕಂಠ ರಾಠೋಡ್‌ನನ್ನು ಇತ್ತೀಚೆಗಷ್ಟೇ ಚಿತ್ತಾಪುರ ಪೊಲೀಸರು ಬಂಧಿಸಿದ್ದರು.
ಗಡಿಪಾರು ಆಗಿದ್ದ ಮಣಿಕಂಠ ರಾಠೋಡ್
ಅಕ್ಕಿ ಅಕ್ರಮ ಸಾಗಾಣಿಕೆಯ ಆರೋಪ ಸೇರಿ ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಮಣಿಕಂಠ ರಾಠೋಡ ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ. ಎಸ್. ರವಿಕುಮಾರ ಆದೇಶ ಹೊರಡಿಸಿದ್ದರು. ಆದರೆ ಹೈಕೋರ್ಟ್‍ನಲ್ಲಿ ಮಣಿಕಂಠ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ಪಡೆದಿದ್ದಾರೆ.