ಕಲಬುರಗಿ: ಬ್ಲೂಟೂತ್ ಬಳಸಿ FDA ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಸೆರೆ

Update: 2023-10-28 14:41 GMT

ಕಲಬುರಗಿ, ಅ. 28: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ನಿಗಮಗಳ ಖಾಲಿ ಹುದ್ದೆಗಳ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಅ.28ರಂದು ಎಫ್‍ಡಿಎ ಕನ್ನಡ, ಇಂಗ್ಲಿಷ್ ಕಮ್ಯುನಿಕೇಷನ್ ಪರೀಕ್ಷೆ ನಡೆದಿದ್ದು, ಆರೋಪಿಯು ಬ್ಲೂಟೂತ್ ಸಹಾಯದಿಂದ ಹೊರಗಿನವರಿಂದ ಕೀ ಉತ್ತರ ಪಡೆದು ಅಕ್ರಮ ಎಸಗುತ್ತಿದ್ದ. ಬಂಧನದ ಬಳಿಕ ಆರೋಪಿ ತ್ರಿಮೂರ್ತಿಯನ್ನು ಇಎನ್‍ಟಿ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಕೂಡಾ ನಡೆಸಲಾಗಿದೆ. ಇನ್ನೋರ್ವ ಅಭ್ಯರ್ಥಿ ಅಭಿಷೇಕ್ ಎಂಬಾತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ ಅಫಜಲಪುರ ಪಟ್ಟಣದ ಮಾಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪರೀಕ್ಷಾ ಕೇಂದ್ರದ ಸಮೀಪದಲ್ಲಿ ಕಾರಿನಲ್ಲಿ ಕುಳಿತು ಬ್ಲೂಟೂತ್ ಮುಖಾಂತರ ಅಭ್ಯರ್ಥಿಗಳಿಗೆ ಕೀ ಉತ್ತರ ರವಾನಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಉತ್ತರ ಹೇಳಿ ಕೊಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲದೆ ಅವರು ಕೊಟ್ಟ ಮಾಹಿತಿ ಅನ್ವಯ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News