ಕಲಬುರಗಿ: ಹಾಡಹಗಲೇ ಗ್ರಾಪಂ ಅಧ್ಯಕ್ಷನ ಬರ್ಬರ ಹತ್ಯೆ
ಕಲಬುರಗಿ, ಅ.13: ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಚೌಡಾಪುರದಲ್ಲಿ ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ನಡೆದಿದೆ.
ಅಫ್ಝಲ್ ಪುರ ತಾಲೂಕಿನ ಮದರಾ ( ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪ ಗೌಡ ಪಾಟೀಲ ಕೊಲೆಯಾದವರು.
ಮದರಾ (ಬಿ) ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರಕ್ಕೆ ಬಳಸುವ ರಥವನ್ನು ದುರಸ್ತಿಗಾಗಿ ಗೌಡಪ್ಪ ಗೌಡ ಚವಡಾಪುರ ಗ್ರಾಮದ ಗ್ಯಾರೇಜೊಂದಕ್ಕೆ ಇಂದು ಬೆಳಗ್ಗೆ ಕೊಂಡೊಯ್ದಿದ್ದರು. ಈ ವೇಳೆ ಗೌಡಪ್ಪ ಗೌಡರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಗೌಡಪ್ಪಗೌಡ ಅಲ್ಲೇ ಕೊನೆಯುಸಿರೆಳೆದಿದ್ದಾರೆ.
ಎರಡು ಕುಟುಂಬಗಳ ಮಧ್ಯದ ಹಳೆಯ ವೈಷಮ್ಯದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಲ್ಬುರ್ಗಿ ಹೆಚ್ಚುವರಿ ಎಸ್ಪಿ ಎನ್. ಶ್ರೀನಿಧಿ, ಡಿವೈಎಸ್ಪಿ ಗೋಪಿ ಬಿ.ಆರ್., ಪಿ.ಎಸ್ಸೈಗಳಾದ ರಾಹುಲ್ ಪವಾಡೆ, ಮಡಿವಾಳಪ್ಪ ಬಾಗೋಡಿ, ಸವಿತಾ ಕಲ್ಲೂರ ಶ್ವಾನದಳದ ಸಿಬ್ಬಂದಿ, ಎಫ್.ಎಸ್.ಎಲ್. ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ ಎಂದು ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಅಫ್ಝಲ್ ಪುರ ತಾಲೂಕಿನ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.