ಕನ್ನಡ ಚಿತ್ರರಂಗ ಚುಕ್ಕಾಣಿ ಇಲ್ಲದ ಹಡಗಿನಂತಾಗಿದೆ: ಹಂಸಲೇಖ ಬೇಸರ
ಮೈಸೂರು: 'ಕನ್ನಡ ಚಲನಚಿತ್ರರಂಗ ಚುಕ್ಕಾಣಿ ಇಲ್ಲದ ಹಡಗಿನಂತಾಗಿದೆ' ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ದ ಸಂಗೀತ ನಿರ್ದೇಶಕ ಹಂಸಲೇಖ ಬೇಸರ ಹೊರಹಾಕಿದ್ದಾರೆ.
ʼʼದೊಡ್ಡ ದೊಡ್ಡ ಮಹನೀಯರು ಸಂಸ್ಥೆಯನ್ನು ಕಟ್ಟಿದ್ದಾರೆ. ಮೂರು ವರ್ಗಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ವಲಯವನ್ನು ಒಗ್ಗಟ್ಟಿನ ತ್ರಿಶೂಲವಾಗಿಟ್ಟು ಕೊಂಡು ಕೆಲಸ ಮಾಡಿದ್ದರು.ಇವತ್ತು ಪ್ಯಾನ್ ಇಂಡಿಯಾದ ವ್ಯಾಪಾರದ ಸೋಗು ಬಂದಿದೆ. ಕನ್ನಡ ಚಿತ್ರರಂಗ ದಿಕ್ಕು ತಪ್ಪಿ ಹೋಗಿದೆ. ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನಿಟ್ಟುಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ ಎನ್ನುವ ದೊಡ್ಡ ತಾಪತ್ರಯ ಬಂದಿದೆʼʼ ಎಂದು ಅವರು ಹೇಳಿದರು.
ʼʼಸಿನೆಮಾಗಳಲ್ಲಿ ಸಂಬಂಧಗಳು ಯಾವುದು ಇರುವುದಿಲ್ಲ. ಬರೀ ಹೊಡೀ ಬಡೀ ಕಿವಿ ಮುಚ್ಚುವ ರೀತಿ ಸಂಗೀತ, ಇದು ಎಲ್ಲಾ ಭಾಷೆಗಳಲ್ಲಿ ಹೊಂದಾಣಿಕೆ ಆಗುತ್ತೆ ಅಂಥ ತಿಳಿದುಕೊಂಡಿದ್ದಾರೆ. ಕನ್ನಡದಲ್ಲಿ 250 ಜನ ಹೊಸ ನಿರ್ದೇಶಕರು ಇದ್ದಾರೆ. 500 ಜನ ಹೊಸ ನಿರ್ಮಾಪಕರು ಇದ್ದಾರೆ. ಇವರ್ಯಾರಿಗೂ ನಮ್ಮ ಚೇಂಬರ್‌ನ ಸಂಪರ್ಕವೇ ಇಲ್ಲ. ಎಲ್ಲರನ್ನೂ ಕರೆದು ಚರ್ಚೆ ಮಾಡುವವರೇ ಇಲ್ಲದ್ದಂತಾಗಿದೆ. ಮುಂದಿನ ದಿನದಲ್ಲಿ ಯಾರಾದರೂ ಬಂದು ಆ ಚುಕ್ಕಾಣಿಯನ್ನು ಹಿಡಿಯಬೇಕುʼʼ ಎಂದು ಅಭಿಪ್ರಾಯ ಪಟ್ಟರು.