ಶಿಷ್ಟಾಚಾರ ವಿವಾದ | ನನ್ನನ್ನು ಸ್ವಾಗತಿಸಲು ಬರದಂತೆ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ: ಪ್ರಧಾನಿ ಮೋದಿ

Update: 2023-08-26 10:08 GMT

ಬೆಂಗಳೂರು: ಆಗಸ್ಟ್ 23ರಂದು ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಂಗಳೂರಿಗೆ ಆಗಮಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾಗಲಿ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರಲಿಲ್ಲ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿಯ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಲೋಪವಾಗಿದೆ ಎಂಬ ವಿವಾದವೊಂದು ಸೃಷ್ಟಿಯಾಗಿದೆ ಎಂದು indiatoday.in ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು, “ಪ್ರಧಾನಿ ಮೋದಿ ಅವರು ಉದ್ದೇಶಪೂರ್ವಕವಾಗಿ ತಮ್ಮನ್ನು ವಿಮಾನ ನಿಲ್ದಾಣದಿಂದ ಸ್ವಾಗತಿಸಬೇಕಿದ್ದ ಮುಖ್ಯಮಂತ್ರಿಗಳನ್ನು ತಡೆದಿದ್ದಾರೆ. ಇದು ದೊಡ್ಡ ಶಿಷ್ಟಾಚಾರ ಲೋಪವಾಗಿದೆ” ಎಂದು ಆರೋಪಿಸಿದೆ.

ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್, “ತಮಗೂ ಮುನ್ನ ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಿದ್ದರಿಂದ ಅವರು (ಪ್ರಧಾನಿ ಮೋದಿ) ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ತಮ್ಮನ್ನು ವಿಮಾನ ನಿಲ್ದಾಣದಿಂದ ಆಮಂತ್ರಿಸುವ ಶಿಷ್ಟಾಚಾರದಿಂದ ಮುಖ್ಯಮಂತ್ರಿಗಳನ್ನು ದೂರವಿಟ್ಟಿದ್ದಾರೆ. ಇದು ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದು, ಕ್ಷುಲ್ಲಕ ಸಣ್ಣತನದ ರಾಜಕೀಯವಲ್ಲದೆ ಮತ್ತೇನಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಚಂದ್ರಯಾನ-1 ಯೋಜನೆಯ ಯಶಸ್ವಿ ಉಡಾವಣೆಯಾದಾಗ ಅಂದಿನ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರಿಗಿಂತಲೂ ಮುಂಚಿತವಾಗಿ ಮುಖ್ಯಮಂತ್ರಿ ಮೋದಿಯವರು ಅಹಮದಾಬಾದ್ ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಗೆ ಭೇಟಿ ನೀಡಿದ್ದುದನ್ನು ಪ್ರಧಾನಿ ಮೋದಿ ಮರೆತುಬಿಟ್ಟರೆ?” ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಸ್ಪಷ್ಟನೆ

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಎಷ್ಟು ಹೊತ್ತಿಗೆ ಬೆಂಗಳೂರು ತಲುಪಲಿದ್ದೇನೆ ಎಂಬ ಕುರಿತು ನನಗೇ ತಿಳಿದಿರದೆ ಇದ್ದುದರಿಂದ ಮುಖ್ಯಮಂತ್ರಿಗಳಿಗೆ ಅಷ್ಟು ಬೇಗ ತೊಂದರೆ ಕೊಡಲು ಬಯಸಲಿಲ್ಲ ಎಂದು ಹೇಳಿದ್ದಾರೆ.

“ನಾನು ಎಷ್ಟು ಹೊತ್ತಿಗೆ ಬೆಂಗಳೂರು ತಲುಪುತ್ತೇನೆ ಎಂಬುದು ನನಗೇ ತಿಳಿದಿಲ್ಲದೆ ಇದ್ದುದರಿಂದ ನನ್ನನ್ನು ಅಷ್ಟು ಬೇಗ ಸ್ವಾಗತಿಸುವ ತೊಂದರೆಯನ್ನು ತೆಗೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಲ್ಲಿ ಮನವಿ ಮಾಡಿದ್ದೆ” ಎಂದು ಎಚ್‍ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.

ನಂತರ, ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ದೂರಮಾಪನ, ಪತ್ತೆ ಮತ್ತು ನಿಯಂತ್ರಣ ಕೇಂದ್ರಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಿದರು.

 ಡಿ.ಕೆ ಶಿವಕುಮಾರ್‌ ಸ್ಪಷ್ಟನೆ

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ , “ನಮಗೆ ರಾಜಕೀಯ ಪ್ರಜ್ಞೆ, ಶಿಷ್ಟಾಚಾರ, ಯಾರಿಗೆ ಯಾವ ಗೌರವ ನೀಡಬೇಕು ಎಂಬ ಪರಿಜ್ಞಾನ ಬಿಜೆಪಿಯವರಿಗಿಂತಲೂ ಹೆಚ್ಚಾಗಿ ಇದೆ. ಶಿಷ್ಟಾಚಾರದ ಪ್ರಕಾರ ಸರ್ಕಾರ ಪ್ರಧಾನಿಗಳ ಸ್ವಾಗತಕ್ಕೆ ಸಿದ್ಧವಿತ್ತು. ಆದರೆ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಬರಬಾರದೆಂದು ಮೊದಲು ಅನಧಿಕೃತವಾಗಿ ನಮಗೆ ಸಂದೇಶ ಬಂದಿತ್ತು. ನಾವು ಮುಖ್ಯಕಾರ್ಯದರ್ಶಿಗಳಿಗೆ ಈ ವಿಚಾರವಾಗಿ ಲಿಖಿತ ಸಂದೇಶ ನೀಡಿ ಎಂದು ಮನವಿ ಮಾಡಿದೆವು. ನಂತರ ಅವರು ಅಧಿಕೃತವಾಗಿ ಪತ್ರದ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಯಾರೂ ಸ್ವಾಗತ ಮಾಡಲು ಬರುವುದು ಬೇಡ ಎಂದು ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ತೆರಳಲಿಲ್ಲʼʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News