ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡಲು ಆಗ್ರಹಿಸಿ ಆ.31ಕ್ಕೆ ‘ರಾಜಭವನ ಚಲೋ: ಡಿ.ಕೆ. ಶಿವಕುಮಾರ್

Update: 2024-08-27 14:33 GMT

ಬೆಂಗಳೂರು: ‘ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿದಂತೆ ತಮ್ಮ ಮುಂದೆ ವಿಚಾರಣೆಗೆ ಕೋರಿ ಬಾಕಿ ಇರುವ ಪ್ರಕರಣಗಳಲ್ಲೂ ರಾಜ್ಯಪಾಲರು ಅನುಮತಿ ನೀಡಬೇಕೆಂದು ಮನವಿ ಮಾಡಲು ಕಾಂಗ್ರೆಸ್ ಪಕ್ಷದಿಂದ ಆ.31ಕ್ಕೆ ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಬಿಗ್ ಬ್ರದರ್, ಪ್ರಾಮಾಣಿಕ ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆಗೆ ಮಂಜೂರು ಮಾಡಿದ ಪ್ರಕರಣವೂ ರಾಜ್ಯಪಾಲರ ಮುಂದಿದೆ. ಲೋಕಾಯುಕ್ತ ಸಂಸ್ಥೆಯು 10 ವರ್ಷಗಳ ತನಿಖೆ ನಡೆಸಿ ಕುಮಾರಸ್ವಾಮಿ ವಿಚಾರಣೆಗೆ ಅನುಮತಿ ಕೋರಿದ್ದಾರೆ. ಆದರೂ ವಿಚಾರಣೆಗೆ ಅನುಮತಿ ನೀಡಿಲ್ಲ. ಕುಮಾರಸ್ವಾಮಿ ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ, ಕೇವಲ ಅಸಲಿ ಕೆಲಸ ಮಾಡುವವರು’ ಎಂದು ಲೇವಡಿ ಮಾಡಿದರು.

‘ಆ.31ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ತೆರಲಿ ಮನವಿ ಸಲ್ಲಿಸಲಾಗುವುದು. ಈ ವೇಳೆ ಮುಖ್ಯಮಂತ್ರಿ, ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿರಲಿದ್ದಾರೆ ಎಂದ ಅವರು, ರಾಜ್ಯಪಾಲರು ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ನೀಡಿಲ್ಲ. ಆದರೆ ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ರಾಜ್ಯಪಾಲರು ಸಿಎಂ ವಿರುದ್ಧ ವಿಚಾರಣೆಗೆ ತರಾತುರಿಲ್ಲಿ ಅನುಮತಿ ನೀಡಿದ್ದಾರೆ ಎಂದು ಅವರು ದೂರಿದರು.

‘ಕಳೆದ ವಾರ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ಕೆಲವು ಸಲಹೆಗಳನ್ನು ಕಳುಹಿಸಿದ್ದೆವು. ರಾಜ್ಯಾಪಾಲರು ತರಾತುರಿಯಲ್ಲಿ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಯಾವುದೇ ಪ್ರಾಥಮಿಕ ತನಿಖೆ ಇಲ್ಲದೇ, ಕೆಲವು ದೂರುಗಳನ್ನು ಆಧರಿಸಿ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ವಿಚಾರ ಕೋರ್ಟ್‍ನಲ್ಲಿದ್ದು ಈ ಬಗ್ಗೆ ಹೆಚ್ಚಿನ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ನ್ಯಾಯಾಲಯ ಕಾನೂನಿನ ಪ್ರಕಾರ ಯಾವ ತೀರ್ಮಾನ ಮಾಡಬೇಕೋ? ಮಾಡಲಿದೆ ಎಂದು ಅವರು ನುಡಿದರು.

ಪ್ರಾಮಾಣಿಕ ಎಚ್‍ಡಿಕೆ: ರಾಜ್ಯದಲ್ಲಿ ಈಗಾಗಲೇ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಇತರೆ ಎಸ್‍ಐಟಿಯಿಂದ ರಾಜ್ಯಪಾಲರ ಬಳಿ ವಿಚಾರಣೆಗೆ ಅನುಮತಿ ನೀಡಿ ಎಂದು ಮನವಿ ಮಾಡಿರುವುದನ್ನು ಅವರ ಗಮನಕ್ಕೆ ತಂದಿದ್ದೇವೆ. ಈ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯಾಗಿ ಆರೋಪಪಟ್ಟಿ ಸಮೇತ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ನಕಲಿ ಸಹಿ ಬಗ್ಗೆ ಯಾಕಪ್ಪ ದೂರು ನೀಡಿಲ್ಲ?: ಈ ಮಧ್ಯೆ ಸತ್ಯಕ್ಕೆ ಹೆಸರಾದ ರಾಷ್ಟ್ರದ ಉಕ್ಕು ಸಚಿವ ಕುಮಾರಸ್ವಾಮಿ ಮಾಧ್ಯಮಗಳಲ್ಲಿ ‘ಅದು ತನ್ನ ಸಹಿಯೇ ಅಲ್ಲ’ ಎಂದು ಹೇಳಿಕೆ ನೀಡಿರುವುದನ್ನು ನೋಡಿದೆ. ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಸುಮಾರು 10ವರ್ಷ ತನಿಖೆ ನಡೆದಿದೆ. ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದೇನೆಂದು ಹೇಳಿರುವುದನ್ನೂ ಗಮನಿಸಿದ್ದೇನೆ. ನಾನು ಅವರ ಕುಟುಂಬ ಹಾಗೂ ಸಹೋದರನ ಆಸ್ತಿ ಬಗ್ಗೆ ಅನೇಕ ಪ್ರಶ್ನೆ ಕೇಳಿದ್ದೆ. ಈವರೆಗೂ ಅವರು ಅದಕ್ಕೆ ಉತ್ತರ ನೀಡಿಲ್ಲ. ನನ್ನ ಕುಟುಂಬದ ಸುದ್ದಿಗೆ ಬರುತ್ತೀಯಾ ಎಂದೆಲ್ಲಾ ಅವರು ಕಿಡಿಕಾರಿದ್ದಾರೆ. ಅವರು ಯಾರ ಕುಟುಂಬದ ವಿಚಾರಕ್ಕೆ ಹೋಗಿದ್ದಾರೆಂಬುದನ್ನು ಹೇಳಬೇಕು. ಅವರು ಹೇಗೆ ಬೇರೆಯವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೋ, ಅದೇ ರೀತಿ ಬೇರೆಯವರು ಅವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೆ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಅಕ್ರಮವಾಗಿ ಕಬ್ಬಿಣದ ಅದಿರು ಭೂಮಿ ಮಂಜೂರು ಪ್ರಕರಣದಲ್ಲಿ ನಾನು ಯಾರಿಗೂ ಶಿಫಾರಸ್ಸು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸರಿ, ನೀವು ಯಾರಿಗೂ ಶಿಫಾರಸ್ಸು ಮಾಡಿಲ್ಲವಾದರೆ ಹಾಗೂ ನಿಮ್ಮ ಸಹಿಯನ್ನು ಬೇರೆಯವರು ನಕಲು ಮಾಡಿದ್ದರೆ ಈ ಬಗ್ಗೆ ನೀವು ಇದದುವರೆಗೂ ಯಾಕೆ ದೂರು ನೀಡಿಲ್ಲ? ಸಿಎಂ ಬಳಿ ದೂರು ನೀಡಲು ಆಗದಿದ್ದರೆ ಯಾವುದಾದರೂ ಪೊಲೀಸ್ ಠಾಣೆಯಲ್ಲಾದರೂ ದೂರು ನೀಡಬಹುದಲ್ಲವೇ? ಮುಖ್ಯಮಂತ್ರಿ ಸ್ಥಾನದಲ್ಲಿ ಕೂತವರ ಸಹಿ ನಕಲು ಮಾಡಿದವರನ್ನು, ನಕಲು ಸಹಿ ಆಧಾರದ ಮೇಲೆ ಗಣಿಗೆ ಮಂಜೂರು ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬಹುದಲ್ಲವೇ? ಎಂದು ಅವರು ಪ್ರಶ್ನಿಸಿದರು.

ಮಿಸ್ಟರ್ ಕುಮಾರಸ್ವಾಮಿ ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕರಿಸಿ ಕೇಂದ್ರದ ಮಂತ್ರಿಯಾಗಿದ್ದೀರಿ. ಅಂದು ಕೋರ್ಟ್ ಮುಂದೆ ಈ ಆದೇಶ ಮಾಡಿರುವುದು ನೀವೇ ಎಂದು ಹೇಳಿದ್ದು, ಇಂದು ಮಾಧ್ಯಮಗಳ ಮುಂದೆ ಅದು ನನ್ನ ಸಹಿಯೇ ಅಲ್ಲ ಎಂದು ಹೇಳುತ್ತಿದ್ದೀರ. ಕುಮಾರಸ್ವಾಮಿ ಅವರೇ ಅದು ನಿಮ್ಮ ಸಹಿ ಅಲ್ಲವಾದರೆ, ಈಗಲಾದರೂ ಅದರ ಬಗ್ಗೆ ದೂರು ನೀಡಿ. ನೀವು ದೊಡ್ಡ ಸರಕಾರದ ಭಾಗವಾಗಿದ್ದೀರಿ. ಆದರೂ ಯಾಕೆ ದೂರು ನೀಡುತ್ತಿಲ್ಲ? ಎಂದು ಅವರು ಕೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ವಕ್ತಾರ ಎಂ.ಲಕ್ಷ್ಮಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ, ರಾಮಚಂದ್ರಪ್ಪ ಈ ವೇಳೆ ಉಪಸ್ಥಿತರಿದ್ದರು.

‘ಕುಮಾರಸ್ವಾಮಿ ಈ ನಕಲಿ ಸಹಿ ಬಗ್ಗೆ ಯಾವುದೇ ತನಿಖೆ ನಡೆಸಲಿ ಎಂದು ಹೇಳಿದ್ದಾರೆ. ಆದರೆ, ನಾವು ವಿಚಾರಣೆ ಮಾಡುವುದು ಬೇರೆ ವಿಚಾರ. ಆದರೆ ಅವರ ಸಹಿ ನಕಲು ಮಾಡಲಾಗಿದೆ ಎಂದು ಅವರೇ ಹೇಳುತ್ತಿದ್ದೀರಲ್ಲವೇ ಅವರು ಮೊದಲು ದೂರು ನೀಡಲಿ. ಅವರು ಸಿಎಂ ಆಗಿ ಹಾಕಲಾಗಿರುವುದು ಅವರ ಸಹಿ. ಹೀಗಾಗಿ ಅವರು ದೂರು ನೀಡಬೇಕು. ಈ ವಿಚಾರದಲ್ಲಿ ವಿಳಂಬವೇಕೆ?’

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News