ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ರಾಜ್ಯಪಾಲರ ಅನುಮತಿ

Update: 2024-08-17 13:39 GMT

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದು, ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸಾಮಾಜಿಕ ಹೋರಾಟಗಾರರಾದ ಟಿ.ಜೆ.ಅಬ್ರಾಹಂ, ಪ್ರದೀಪ್‍ಕುಮಾರ್ ಎಸ್.ಪಿ. ಮತ್ತು ಸ್ನೇಹಮಹಿ ಕೃಷ್ಣ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಆದೇಶ ನೀಡಿದ್ದಾರೆ.

ಸಂಪುಟ ಸಹೋದ್ಯೋಗಿಗಳು ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ಸಿಎಂ ಸಿದ್ದರಾಮಯ್ಯರ ಬೆನ್ನಿಗೆ ನಿಂತಿದೆ. ಈ ಮಧ್ಯೆ ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳ ಹಾಗೂ ಲೋಕಾಯುಕ್ತ ಕೋರ್ಟ್‍ನಿಂದ ಸುಪ್ರೀಂ ಕೋರ್ಟ್ ವರೆಗೂ ತೆರಳಲು ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನೇತೃತ್ವದಲ್ಲಿ ವಕೀಲರ ತಂಡವು ಸಿದ್ಧವಾಗಿದೆ.

‘ಮುಡಾ’ ನಿವೇಶನ ಹಂಚಿಕೆ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ದೂರಿನಲ್ಲಿ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟಿಕರಿಸುವ ದಾಖಲೆಗಳಿದ್ದು, ಸಿದ್ಧರಾಮಯ್ಯ ವಿರುದ್ಧ ಆರೋಪಗಳ ಕುರಿತು ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳು, ಕಾನೂನು ತಜ್ಞರ ಅಭಿಪ್ರಾಯ ಮತ್ತು ಸಂಪುಟದ ನಿರ್ಣಯವನ್ನು ಪರಿಶೀಲಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17 ‘ಎ’ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ಧರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಜುಲೈ 26ರಂದು ಸಿಎಂ ಸಿದ್ದರಾಮಯ್ಯರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ವಿವರಣೆ ಕೋರಲಾಗಿತ್ತು. ಆಗಸ್ಟ್ 1 ರ ಸಂಪುಟದ ನಿರ್ಣಯವು ತಮ್ಮ ಕಚೇರಿಗೆ ತಲುಪಿತು. ಆ.3ರಂದು ಸಿಎಂ ಪ್ರತಿಕ್ರಿಯೆಯು ತಲುಪಿತು. ಅದರೊಂದಿಗೆ ಕೆಲವು ದಾಖಲೆಗಳನ್ನು ಸಲ್ಲಿಸಲಾಗಿತ್ತು ಎಂದು ಗೆಹ್ಲೋಟ್ ತಮ್ಮ ಆದೇಶದಲ್ಲಿ ವಿವರಣೆ ನೀಡಿದ್ದಾರೆ.

ಮುಡಾದಲ್ಲಿ ಅಕ್ರಮಗಳ ಕುರಿತು ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದ ಸಮಿತಿ ರಚಿಸಲಾಗಿತ್ತು ಆ ಬಳಿಕ ಏಕಸದಸ್ಯ ಆಯೋಗವನ್ನು ನೇಮಿಸಲಾಗಿದೆ. ಯಾರ ವಿರುದ್ಧ ಆರೋಪಗಳು ಕೇಳಿ ಬಂದಿವೆಯೋ ಅದೇ ವ್ಯಕ್ತಿ ತನಿಖೆ ಹೇಗಿರಬೇಕೆಂಬುದನ್ನು ನಿರ್ಧರಿಸುವುದು ಕಾನೂನು ಸಮ್ಮತವಲ್ಲ. ಆದುದರಿಂದ ಸಚಿವ ಸಂಪುಟ ನಿರ್ಧಾರವು ಕಾನೂನುಬಾಹಿರ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ವಿಚಾರಣೆಗೆ ಅನುಮತಿ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ಸಿದ್ದರಾಮಯ್ಯರ ಸಲಹೆಯಂತೆ ರಚನೆಯಾದ ಸಂಪುಟವು ಅವರ ವಿರುದ್ಧದ ಆರೋಪಗಳ ಸಂಬಂಧ ದೂರುಗಳನ್ನು ತಿರಸ್ಕರಿಸುವಂತೆ ಸಲಹೆ ನೀಡುವ ನಿರ್ಣಯ ಕೈಗೊಂಡಿದೆ. ಈ ನಿರ್ಣಯವು ವಿಶ್ವಾಸಾರ್ಹ ಅಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

‘ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಗಳು ಲಭ್ಯವಿದ್ದಾಗಲೂ ತನಿಖೆಗೆ ಅನುಮತಿ ನಿರಾಕರಿಸಿದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ. ತಮ್ಮ ವಿರುದ್ಧ ತನಿಖೆ ನಡೆಸಲು ಅವಕಾಶ ಇಲ್ಲವೆಂಬ ಭಾವನೆಯಿಂದ ಅಧಿಕಾರದಲ್ಲಿರುವ ವ್ಯಕ್ತಿಗಳು ಕಾನೂನು ಉಲ್ಲಂಘಿಸುವ ಸಾಧ್ಯತೆಗಳಿರುತ್ತವೆ’ ಎಂಬ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಉಲ್ಲೇಖಿಸಿರುವ ರಾಜ್ಯಪಾಲರು, ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News