ಕೆಎಎಸ್ ಪರೀಕ್ಷೆ : ಆಕ್ಷೇಪಣೆಗೆ ಸೆ.4ರ ವರೆಗೆ ಅವಕಾಶ
ಬೆಂಗಳೂರು : ಇತ್ತೀಚಿಗೆ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಪಿಎಸ್ಸಿ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೆ.4ರವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಗಳನ್ನು ಅಂದು ಸಂಜೆ 5.30ರ ಒಳಗೆ ಆಯೋಗಕ್ಕೆ ಸಲ್ಲಿಸಲು ಸೂಚಿಸಿದೆ.
ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆಗೆ 50 ಶುಲ್ಕ ನಿಗದಿ ಮಾಡಿದ್ದು, ಐಪಿಒ ಅಥವಾ ಡಿಡಿ ಮೂಲಕ ಆಯೋಗದ ಕಾರ್ಯದರ್ಶಿ ಹೆಸರಿಗೆ ಸಂದಾಯ ಮಾಡಬೇಕು. ಜೊತೆಗೆ ಪ್ರಶ್ನೆ ಸಂಖ್ಯೆ, ಪರೀಕ್ಷಾ ನೋಂದಣಿ ಸಂಖ್ಯೆ ನಮೂದಿಸಬೇಕು. ಪ್ರವೇಶ ಪತ್ರ ಲಗತ್ತಿಸಬೇಕು ಎಂದು ಸೂಚಿಸಲಾಗಿದೆ.
ಇನ್ನೂ, ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ಮಾಡಿದ್ದು ಗೂಗಲ್ ಅಥವಾ ಎಐ ಅಲ್ಲ. ಭಾಷಾಂತರ ಇಲಾಖೆಯ ಭಾಷಾಂತರಕಾರರು ಎಂದು ಕರ್ನಾಟಕ ಲೋಕ ಸೇವಾ ಆಯೋಗ ಪ್ರಕಟನೆಯಲ್ಲಿ ಉಲ್ಲೇಖಿಸಿದೆ.
ಅಭ್ಯರ್ಥಿಗಳ ಆಗ್ರಹವೇನು?: ‘ಕೆಪಿಎಸ್ಸಿ ಅಧಿಸೂಚನೆಯಲ್ಲಿ ನೀಡಿದ ಪರೀಕ್ಷಾ ವಿವರದಂತೆ ಪ್ರಶ್ನೆ ಪತ್ರಿಕೆ-2ರ ಬೌದ್ಧಿಕ ಸಾಮರ್ಥ್ಯ ವಿಭಾಗದಲ್ಲಿ 30 ಪ್ರಶ್ನೆಗಳನ್ನು ಕೇಳಬೇಕಿತ್ತು. ಆದರೆ, ಕೇಳಿರುವುದು 18 ಮಾತ್ರ. ಈ ಕುರಿತು ಆಯೋಗ ಸ್ಪಷ್ಟನೆ ನೀಡಿಲ್ಲ. ಕೈಬಿಟ್ಟ ಪ್ರಶ್ನೆಗಳಿಗೆ ಪರಿಹಾರಾತ್ಮಕ ಅಂಕಗಳನ್ನು ನೀಡಬೇಕು ಎಂದು ಹಲವು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಕೆಪಿಎಸ್ಸಿ ಹಾಸ್ಯಸ್ಪದ: ‘ಕೆಪಿಎಸ್ಸಿ ನಡೆಸುವ ಕೆಎಎಸ್ ಪರೀಕ್ಷೆ ಸಂಬಂಧ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಆಯೋಗ ಪ್ರಕಟನೆ ಹೊರಡಿಸಿರುವುದು ಹಾಸ್ಯಾಸ್ಪದ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶುಕ್ರವಾರ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕ ಲೋಕ ಸೇವಾ ಆಯೋಗ ತಯಾರಿಸಿರುವ ಪ್ರಶ್ನೆ ಪತ್ರಿಕೆಯಲ್ಲಿರುವ ಗೊಂದಲಗಳನ್ನು, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೊರಡಿಸಿರುವ ಪ್ರಕಟಣೆ ಹಾಸ್ಯಾಸ್ಪದವಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿರುವ ದೋಷಗಳು ಸ್ವಯಂ ವಿವರಣಾತ್ಮಕ ಆಗಿದೆ ಎಂದಿದ್ದಾರೆ.
ಯಾವುದೇ ಪ್ರಶ್ನೆ ಪತ್ರಿಕೆ ತರ್ಜುಮೆಯ ಗುಣಮಟ್ಟ, ಆಂಗ್ಲ ಹಾಗೂ ಕನ್ನಡದಲ್ಲಿ ಪ್ರಶ್ನೆಗಳ ಸಾಮ್ಯತೆ, ವ್ಯಾಕರಣ ದೋಷ, ಮುದ್ರಣದ ಗುಣಮಟ್ಟ, ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ದ ಅರ್ಥಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿ, ಪ್ರೂಫ್ ಮಾಡಿದ ನಂತರ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಈ ಕೂಡಲೇ ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ನಿಮ್ಮ ಇಲಾಖೆಯಲ್ಲಿ ಕಿಂಚಿತ್ತಾದರೂ ಶಿಸ್ತಿದೆ ಎಂದು ಮೇಲ್ಪಂಕ್ತಿ ಹಾಕಿಕೊಡಿ ಎಂದು ಅವರು ಆಗ್ರಹಿಸಿದ್ದಾರೆ.
‘ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದ್ದು, ಪರೀಕ್ಷೆಗಳನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಬೇಕು.ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.