ಕೆರೆಗೋಡು ಘಟನೆ ಬಿಜೆಪಿಯ ಧ್ರುವೀಕರಣ ತಂತ್ರದ ಭಾಗ: ಸಚಿವ ಎಂ.ಬಿ ಪಾಟೀಲ್

Update: 2024-01-31 07:25 GMT

ಬೆಂಗಳೂರು: ಕರ್ನಾಟಕವು ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು, ಬಿಜೆಪಿ ಧರ್ಮದ ಆಧಾರದ ಮೇಲೆ ಜನರ ಧ್ರುವೀಕರಣ ಮಾಡುತ್ತ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ಮಂಡ್ಯದ ಕೆರೆಗೋಡಿನಲ್ಲಿ ನಡೆದ ಘಟನೆ ಇಂತಹ ಷಡ್ಯಂತ್ರದ ಭಾಗವಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಬುಧವಾರ ಹೇಳಿದ್ದಾರೆ.

ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‌ʼನಾವು ಹಿಂದೂ ಧರ್ಮವನ್ನು ಪ್ರೀತಿಸಬೇಕು; ಉಳಿದ ಧರ್ಮಗಳನ್ನು ಗೌರವಿಸಬೇಕು. ರಾಮ, ಶಿವ, ಮಹಾವೀರ, ಬಸವಣ್ಣ ಯಾರ ಸ್ವತ್ತೂ ಅಲ್ಲ. ನಮ್ಮ ಸರಕಾರವು ಪ್ರತಿಯೊಂದು ಧರ್ಮದ ಜನರನ್ನೂ ರಕ್ಷಿಸಲಿದೆ’ ಎಂದು ಪ್ರತಿಪಾದಿಸಿದರು.

ಎಚ್.ಡಿ.ಕುಮಾರಸ್ವಾಮಿ ಈಗ ಬಿಜೆಪಿ ಪರ ಮಾತನಾಡುತ್ತಿದ್ದಾರೆ. ಹಿಂದೆ ಇದೇ ವ್ಯಕ್ತಿ ಬಿಜೆಪಿಯನ್ನು ಹಿಗ್ಗಾಮುಗ್ಗ ಟೀಕಿಸಿದ್ದರು. ಆಗ ಅಪಾಯಕಾರಿಯಾಗಿ ಕಾಣುತ್ತಿದ್ದ ಬಿಜೆಪಿ, ಅವರಿಗೆ ಈಗೇಕೆ ಹಿತಕರವಾಗಿ ಕಾಣುತ್ತಿದೆ? ಜನರು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ ಎಂದು ಅವರು ನುಡಿದರು.

ಗ್ಯಾರಂಟಿಗಳಿಗೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕಡಿಮೆ ಸೀಟುಗಳು ಬಂದರೆ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂದಿರುವ ಮಾಗಡಿ ಶಾಸಕರ ಮಾತು ಸರಿಯಲ್ಲ. ಈಗಾಗಲೇ ಜಾರಿಗೊಳಿಸಿರುವ ಗ್ಯಾರಂಟಿಗಳೆಲ್ಲವೂ ಐದು ವರ್ಷಗಳ ಕಾಲ ಮುಂದುವರಿಯಲಿವೆ ಎಂದು ಪಾಟೀಲ್ ಸ್ಪಷ್ಪಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News