ಸಿಸಿಬಿ ಪೊಲೀಸರ ಸೋಗಿನಲ್ಲಿ ಅಪಹರಣ: ಐವರು ಆರೋಪಿಗಳ ಸೆರೆ

Update: 2023-10-22 14:36 GMT

ಬೆಂಗಳೂರು, ಅ.22: ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನನ್ನು ಅಪಹರಿಸಿ 5 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಭಾತ್ಮೀದಾರನ ಸಹಿತ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮುಹಮ್ಮದ್ ಖಾಸಿಂ ಮುಜಾಹಿದ್, ಮುಕ್ತಿಯಾರ್, ವಸಿಂ, ಶಬೀರ್ ಹಾಗೂ ಶೋಯೆಬ್ ಬಂಧಿತ ಆರೋಪಿಗಳಾಗಿದ್ದಾರೆ.

ಸಿಸಿಬಿ ಪೊಲೀಸರ ಭಾತ್ಮೀದಾರನಾಗಿದ್ದ ಮುಹಮ್ಮದ್ ಖಾಸಿಂ ಮುಜಾಹಿದ್, ಸಿಸಿಬಿ ಕಚೇರಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಸೆ.2ರಂದು ಕಾಲುಸಿಂಗ್ ಎಂಬಾತ ತನ್ನ ಕಾರಿನಲ್ಲಿ ಬರುತ್ತಿದ್ದಾಗ ವಿ.ವಿ. ಪುರಂ ಬಳಿ ಆರೋಪಿ ಮತ್ತವನ ತಂಡ ಆತನನ್ನು ಅಡ್ಡಗಟ್ಟಿ ಸುತ್ತುವರೆದಿತ್ತು ಎನ್ನಲಾಗಿದೆ.

ನಂತರ ‘ನಾವು ಸಿಸಿಬಿ ಪೊಲೀಸರು' ಎನ್ನುತ್ತ ಕಾಲುಸಿಂಗ್‍ನನ್ನು ಕಾರಿನ ಹಿಂಬದಿ ಸೀಟ್‍ನಲ್ಲಿ ಕೂರಿಸಿ, ನೀನು ಗಾಂಜಾ ಸರಬರಾಜುದಾರ ಎಂಬ ಮಾಹಿತಿಯಿದೆ ಎಂದು ಆತನ ಕಣ್ಣಿಗೆ ಬಟ್ಟೆ ಕಟ್ಟಿ ವಿಲ್ಸನ್ ಗಾರ್ಡನ್‍ನ ಮನೆಯೊಂದಕ್ಕೆ ಕರೆದೊಯ್ದಿದ್ದರು. ಮನೆಯಲ್ಲಿ ಕಾಲುಸಿಂಗ್‍ಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಆತನ ಮೊಬೈಲ್‍ನಿಂದ ಆತನ ಸ್ನೇಹಿತನಿಗೆ ಫೋನ್ ಮಾಡಿ ‘ನಾವು ಸಿಸಿಬಿ ಪೊಲೀಸರು' ಎಂದು ಐದು ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಈ ವೇಳೆ ಕಾಲುಸಿಂಗ್ ಸ್ನೇಹಿತರು ಪರಿಚಿತ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಸಿಸಿಬಿ ಪೊಲೀಸರಿಗೂ ವಿಷಯ ರವಾನೆಯಾಗಿದೆ ಎಂಬುದನ್ನು ಅರಿತ ಆರೋಪಿಗಳು ಕಾಲುಸಿಂಗ್‍ನ ಬಿಟ್ಟು ಕಳುಹಿಸಿದ್ದರು. ಇದಾದ ನಂತರ ಕಾಲುಸಿಂಗ್ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಘಟನೆ ಸಂಬಂಧ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News