ಕೆಎಸ್‍ಡಿಎಲ್; 2030ರ ವೇಳೆಗೆ ಐದು ಸಾವಿರ‌ ಕೋಟಿ ರೂ. ವಹಿವಾಟು ಗುರಿ: ಸಚಿವ ಎಂ.ಬಿ ಪಾಟೀಲ್

Update: 2024-01-05 11:24 GMT

ಬೆಂಗಳೂರು: ಮೈಸೂರು ಮಹಾರಾಜರು ಮತ್ತು ಸರ್.ಎಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕೆಎಸ್‍ಡಿಎಲ್ ಸದ್ಯಕ್ಕೆ ವಾರ್ಷಿಕವಾಗಿ 1,200 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಲಾಭದ ಹಾದಿಯಲ್ಲಿದೆ. ಇದು 2030ರ ಹೊತ್ತಿಗೆ 5,000 ಕೋಟಿ ರೂ. ಮುಟ್ಟಬೇಕು ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಶುಕ್ರವಾರ ಹೇಳಿದರು

100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್‍ಡಿಎಲ್) ಸಿಬ್ಬಂದಿ ವರ್ಗಕ್ಕೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಸಮಗ್ರ ಆರೋಗ್ಯ ತಪಾಸಣೆ ಶಿಬಿರ ಮತ್ತು ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಶವಂತಪುರದಲ್ಲಿ ಇರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‍ಡಿಎಲ್) ಆವರಣದಲ್ಲಿ ಸರಕಾರಿ ಕಚೇರಿಗಳಿಗೆ ಜಾಗ ಒದಗಿಸಲು ಸುಸಜ್ಜಿತ ಸಂಕೀರ್ಣ ನಿರ್ಮಿಸಲಾಗುವುದು. ಮುಂದಿನ 100 ವರ್ಷಗಳ ಅವಧಿಗೆ ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟುಕೊಂಡು ಈ ಕೆಲಸ ಕೈಗೊಳ್ಳಲಾಗುವುದು ಎಂದು 

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ಆವರಣದಲ್ಲಿ ಹಲವು ಸರಕಾರಿ ಮತ್ತು ಖಾಸಗಿ ಕಂಪನಿಗಳ ಕಚೇರಿಗಳಿಗೆ ಸ್ಥಳಾವಕಾಶ ಕೊಡಲಾಗಿದೆ. ಅದೇ ಮಾದರಿಯನ್ನೂ ಕೆಎಸ್‍ಡಿಎಲ್ ನಲ್ಲೂ ಅಳವಡಿಸಿಕೊಳ್ಳಲಾಗುವುದು. ಕೆಎಸ್‍ಡಿಎಲ್ ವತಿಯಿಂದಲೇ ಹಂತಹಂತವಾಗಿ ಇದನ್ನು ನಿರ್ಮಿಸಲಾಗುವುದು. ಇದರಿಂದ ಸಂಸ್ಥೆಯು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಸುಲಭವಾಗಲಿದೆ ಎಂದು ಅವರು ನುಡಿದರು.

ಕೆಎಸ್‍ಡಿಎಲ್ ಆವರಣದಲ್ಲಿ ದಿನನಿತ್ಯದ ದಿನಸಿ ಪದಾರ್ಥಗಳು, ಡೆಟಾಲ್, ಹ್ಯಾಂಡ್ ಸೋಪ್ ಮುಂತಾದವೆಲ್ಲ ಲಭ್ಯವಾಗಬೇಕು. ಸದ್ಯಕ್ಕೆ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆ ವಿತರಣೆ ಚೆನ್ನಾಗಿ ನಡೆಯುತ್ತಿದೆ. ಸಂಸ್ಥೆಯು ಕಾರ್ಮಿಕರ ಯೋಗಕ್ಷೇಮಕ್ಕೂ ಆದ್ಯತೆ ನೀಡುವ ಉತ್ತರದಾಯಿತ್ವವನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.

ಎಂಎಸ್ಐಎಲ್ ಗೆ ಮತ್ತಷ್ಟು ಬಲ

ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನಡೆಸುವ ವಹಿವಾಟನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಕೇರಳ ಮಾದರಿಯಲ್ಲಿ ಚಿಟ್ ಫಂಡ್ ನಡೆಸಲಾಗುವುದು. ಇದರ ಮೂಲಕ ವಾರ್ಷಿಕ 10 ಸಾವಿರ ಕೋಟಿ ರೂ. ವ್ಯವಹಾರ ಬೆಳೆಸಲಾಗುವುದು. ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಹಕಾರ ತೆಗೆದುಕೊಂಡು, ಖಾಸಗಿಯವರಿಗೆ ಆರೋಗ್ಯಕರ ಸ್ಪರ್ಧೆ ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಎಸ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ಪ್ರಧಾನ ವ್ಯವಸ್ಥಾಪಕ (ಆಡಳಿತ) ಗಂಗಪ್ಪ, ಮಲ್ಲಿಗೆ ಆಸ್ಪತ್ರೆ ಸಿಇಒ ಡಾ.ಶ್ರೀನಿವಾಸ, ಕೈಗಾರಿಕಾ ಇಲಾಖೆಯ ಮಹಾಂತೇಶ ಬಿರಾದರ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News