25 ಎಕರೆ ಜಮೀನು ಕೊಡುವುದಕ್ಕೆ ಅವರೇನು ಮಹಾರಾಜರ ವಂಶಸ್ಥರಾ? : ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು

Update: 2024-11-09 13:30 GMT

PC : x/@hd_kumaraswamy

ಚನ್ನಪಟ್ಟಣ : ಶಾಲೆಗೆ 25 ಎಕರೆ ದಾನ ನೀಡೀದ್ದೇನೆಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರು ಅಷ್ಟೊಂದು ಜಮೀನು ಕೊಡುವುದಕ್ಕೆ ಅವರೇನು ಮಹಾರಾಜರ ವಂಶಸ್ಥರಾ? ಎಂದು ತಿರುಗೇಟು ನೀಡಿದ್ದಾರೆ.

ಶನಿವಾರ ಚನ್ನಪಟ್ಟಣ ಕ್ಷೇತ್ರದ ಮುಕುಂದ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಎಲ್ಲಿ ಜಮೀನು ಕೊಟ್ಟಿದ್ದಾರೆ? 25 ಎಕರೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ, ನಾನೂ ಸಂತೋಷ ಪಡುತ್ತೇನೆ ಎಂದರು

ಸುಳ್ಳು ಹೇಳಲು ಇತಿ ಮಿತಿ ಇರಬೇಕು. ನಾನು ಇವರ ರೀತಿ ಅದು ಮಾಡಿದ್ದೇನೆ, ಇದು ಮಾಡಿದ್ದೇನೆ ಎಂದು ಬೋರ್ಡ್ ಹಾಕಿಕೊಂಡಿಲ್ಲ. ಆದರೆ, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೆಲ್ಲ ಅಭಿವೃದ್ದಿ ಮಾಡಿದ್ದೇನೆ ಎಂಬುದು ಜನತೆಗೆ ಗೊತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ನಾನು ಮುಖ್ಯಮಂತ್ರಿ ಆಗುವ ಮೊದಲು ರಾಜ್ಯದಲ್ಲಿ ಎಷ್ಟು ಕಾಲೇಜು, ಹೈಸ್ಕೂಲ್‍ಗಳು ಇದ್ದವು? ನನ್ನ 20 ತಿಂಗಳ ಆಡಳಿತದಲ್ಲಿ ಎಷ್ಟಾದವು ಎಂಬುದಕ್ಕೆ ದಾಖಲೆಗಳೇ ಮಾಹಿತಿ ಕೊಡುತ್ತವೆ. ಯಾರಾದರೂ ತೆಗೆದು ನೋಡಬಹುದು ಎಂದು ಕುಮಾರಸ್ವಾಮಿ ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಏನು? ಸಾತನೂರು, ಕನಕಪುರ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಏನು ಮಾಡಿದ್ದಾರೆ. ಪಟ್ಟಿ ಮಾಡಲಿ. ಇಷ್ಟು ವರ್ಷ ಆಡಳಿತ ಮಾಡಿರುವವರಿಗೆ ಅವರ ತವರೂರು ದೊಡ್ಡಾಲಹಳ್ಳಿಯಲ್ಲಿ ಮತಗಳ ಲೀಡ್ ಬರುತ್ತಿಲ್ಲ ಯಾಕೆ? ಇವರು 25 ಎಕರೆ ಕೊಟ್ಟಿದ್ದಾರೋ ಅಥವಾ 25 ಗುಂಟೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. 

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News