ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆ ಪ್ರತಿನಿಧಿಯೇ: ಡಿ.ಕೆ.ಶಿವಕುಮಾರ್ ತಿರುಗೇಟು

Update: 2023-10-14 13:42 GMT

ಬೆಂಗಳೂರು, ಅ.14: ಆದಾಯ ತೆರಿಗೆ(ಐಟಿ) ಇಲಾಖೆಯ ಅಧಿಕಾರಿಗಳ ದಾಳಿ ವಿಚಾರವಾಗಿ ನನ್ನ ಹೆಸರು ತಳುಕು ಹಾಕಿ ಟೀಕೆ ಮಾಡುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ. ಆದರೂ ಮಾತನಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯಾರು ಏನು ಆರೋಪ ಮಾಡುತ್ತಾರೊ ಮಾಡಲಿ. ಆದಾಯ ಇಲಾಖೆ ಅಧಿಕಾರಿಗಳ ದಾಳಿ, ತನಿಖೆ ಮುಗಿದ ನಂತರ ತಮ್ಮ ಹೇಳಿಕೆಯನ್ನು ಪ್ರಕಟಿಸಲಿ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ನನ್ನ ವಿರುದ್ಧ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಆಗಲಿ, ಬಿಜೆಪಿ ನಾಯಕರಾಗಲಿ ಆದಾಯ ಇಲಾಖೆಯ ಪ್ರತಿನಿಧಿಗಳೇನೂ ಅಲ್ಲ. ನಾನು ತಿಹಾರ್ ಜೈಲಿಗೆ ಹೋಗುತ್ತೇನೆ ಎಂದು ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಆ ಮೂಲಕ ತಾವು ಏನು ಮಾಡಲು ಹೊರಟಿದ್ದೇನೆ ಎಂಬುದನ್ನು ಹೇಳಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಇನ್ನು ಮುಂದೆ ರಾಜ್ಯದಲ್ಲಿ ನಡೆಯಲಿರುವ ಐಟಿ ದಾಳಿಗಳು ಕುಮಾರಸ್ವಾಮಿ ಹಾಗೂ ಬಿಜೆಪಿ ಪ್ರೇರಿತ ದಾಳಿಯಾಗಲಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಕಾಲದಲ್ಲಿ ಏನಾಯ್ತು? ಆಗ ಅವರಿಗೆ ಏನು ಸಿಕ್ಕಿದೆ? ಎಲ್ಲವೂ ದಾಖಲೆಗಳಲ್ಲಿ ಇವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಬಿಡುಗಡೆ ಮಾಡಿದ ನಂತರ ಮಾತನಾಡೋಣ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News