ಇಸ್ರೋದ ʼಅನಾಲಾಗ್ʼ ಬಾಹ್ಯಾಕಾಶ ಅಭಿಯಾನಕ್ಕೆ ಚಾಲನೆ

Update: 2024-11-01 15:26 GMT

PC : @isro

ಬೆಂಗಳೂರು: ಇಸ್ರೋ ಶುಕ್ರವಾರ ತನ್ನ ಮೊದಲ ಅನಾಲಾಗ್(ಸದೃಶ) ಬಾಹ್ಯಾಕಾಶ ಅಭಿಯಾನಕ್ಕೆ ಲಡಾಖ್‌ನ ಲೇಹ್‌ನಲ್ಲಿ ಚಾಲನೆ ನೀಡಿದೆ. ಬಾಹ್ಯಾಕಾಶ ಪರಿಶೋಧನೆಗಳ ಸಮಯದಲ್ಲಿ ಎದುರಾಗುವ ಸವಾಲಿನ ಪರಿಸ್ಥಿತಿಗಳಿಗೆ ತನ್ನ ಗಗನಯಾತ್ರಿಗಳನ್ನು ಸಿದ್ಧಗೊಳಿಸುವುದು ಇಸ್ರೋದ ಈ ಅಭಿಯಾನದ ಉದ್ದೇಶವಾಗಿದೆ.

ಇಸ್ರೋದ ಮಾನವ ಬಾಹ್ಯಾಕಾಶ ಯಾನ ಕೇಂದ್ರ, ಎಎಕೆಎ ಸ್ಪೇಸ್ ಸ್ಟುಡಿಯೊ,ಲಡಾಖ್ ವಿವಿ,ಐಐಟಿ ಬಾಂಬೆ ಇವುಗಳ ಸಹಭಾಗಿತ್ವದ ಈ ಯೋಜನೆಯನ್ನು ಲಡಾಖ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯು ಬೆಂಬಲಿಸಿದೆ.

ಭೂಮಿಯಿಂದ ಹೊರಗೆ ಬೇಸ್ ಸ್ಟೇಷನ್‌ನಲ್ಲಿಯ ಸವಾಲುಗಳನ್ನು ಎದುರಿಸಲು ಅಂತರ್‌ಗ್ರಹೀಯ ಆವಾಸ ಸ್ಥಾನದಲ್ಲಿಯ ಜೀವನವನ್ನು ಈ ಅಭಿಯಾನವು ಅನುಸರಿಸಲಿದೆ ಎಂದು ಇಸ್ರೋ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಲಡಾಖ್‌ನ ತೀವ್ರ ಹವಾಮಾನ ಮತ್ತು ಭೌಗೋಳಿಕ ಪ್ರದೇಶಗಳನ್ನು ಪರಿಗಣಿಸಿ ಚಂದ್ರ ಮತ್ತು ಮಂಗಳನಲ್ಲಿಯ ಪರಿಸ್ಥಿತಿಗಳನ್ನು ಅನುಕರಿಸುವ ಗುರಿಯನ್ನು ಅಭಿಯಾನವು ಹೊಂದಿದೆ. ಲಡಾಖ್ ಶೀತ ಮರುಭೂಮಿಯಾಗಿದ್ದು ಇಲ್ಲಿಯ ಹವಾಮಾನವು ಮರುಭೂಮಿ ಮತ್ತು ಆರ್ಕ್ಟಿಕ್ ಪ್ರದೇಶಗಳ ಮಿಶ್ರಣವಾಗಿದೆ. ಬೇಸಿಗೆಯಲ್ಲಿ ಇಲ್ಲಿ ತಾಪಮಾನವು 3ರಿಂದ 35 ಡಿ.ಸೆಂ. ಮತ್ತು ಚಳಿಗಾಲದಲ್ಲಿ ಮೈನಸ್ 20ರಿಂದ ಮೈನಸ್ 35 ಡಿ.ಸೆಂ.ಇರುತ್ತದೆ. ಚಳಿಗಾಲದಲ್ಲಿ ಭಾರೀ ಹಿಮಪಾತವನ್ನು ಈ ಪ್ರದೇಶವು ಅನುಭವಿಸುತ್ತದೆ. ಈ ಕಾರಣಗಳಿಂದ ಇಸ್ರೋ ಈ ಪ್ರದೇಶವನ್ನು ತನ್ನ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News