‘ಭ್ರಷ್ಟ ಜನತಾ ಪಾರ್ಟಿ’ ಸ್ವಚ್ಛಗೊಳಿಸಲು ಬಿಎಸ್‍ವೈ ಪ್ರವಾಸ ಮಾಡಲಿ: ಕಾಂಗ್ರೆಸ್ ಲೇವಡಿ

Update: 2023-09-20 13:38 GMT

ಬೆಂಗಳೂರು, ಸೆ. 20: ʼಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸರಕಾರದ ವಿರುದ್ಧ ರಾಜ್ಯ ಪ್ರವಾಸ ಮಾಡುವ ಬದಲು ಕಾಸಿಗಾಗಿ ಟಿಕೆಟ್ ಮಾರಾಟ ಮಾಡುವ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಬುಧವಾರ ಎಕ್ಸ್‍ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ತಾವೇ ವಿರೋಧಿಸುತ್ತಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ತಾವೇ ಮಂಡಿಸುವಂತಹ ಅನಿವಾರ್ಯತೆ ಸೃಷ್ಟಿಯಾಗಿದ್ದಕ್ಕೆ ಕಾರಣ ಸೋಲಿನ ಭೀತಿಯೇ ಹೊರತು ನೈಜ ಕಾಳಜಿ ಅಲ್ಲ’ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

 ‘ಮಹಿಳಾ ಮೀಸಲಾತಿ ಮಸೂದೆ ಕಾಂಗ್ರೆಸ್‍ನ ಕನಸಿನ ಕೂಸು, 1989ರಲ್ಲಿ ರಾಜೀವ್ ಗಾಂಧಿಯವರು ಪರಿಚಯಿಸಿದರು. ಆದರೆ. ಇದೇ ಬಿಜೆಪಿ ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ’ ಎಂದು ಟೀಕಿಸಿದೆ.

‘ಬಿಜೆಪಿ ಟಿಕೆಟ್ ಹೆಸರಲ್ಲಿ ಕೋಟಿ ಕೋಟಿ ರೂ.ಅಕ್ರಮ ವಹಿವಾಟು ನಡೆದಿದ್ದು, ವಂಚನೆ ನಡೆದಿದ್ದು ಎಲ್ಲವೂ ಸಿ.ಟಿ.ರವಿ ಅವರಿಗೆ ಹಾಗೂ ಬಿಜೆಪಿಯ ಬಾಡಿಗೆ ಬಾಷಣಕೋರನಿಗೆ ಮೊದಲೇ ತಿಳಿದಿತ್ತಂತೆ. ಅಕ್ರಮವೊಂದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದೇಕೆ ಬಿಜೆಪಿ? ಅಥವಾ ಬಿಜೆಪಿ ನಿಜಕ್ಕೂ ಹಣ ವಸೂಲಿ ಮಾಡಿ ಟಿಕೆಟ್ ನೀಡುವ ಕೆಲಸ ಮಾಡಿತ್ತೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಈ ಅಕ್ರಮದಲ್ಲಿ ಯಾರೇ ಬಾಗಿಯಾಗಿದ್ದರೂ ಬಿಡುವುದಿಲ್ಲ, ಸೂಕ್ತ ಸಾಕ್ಷ್ಯಧಾರವಿದ್ದರೆ ಬಿಜೆಪಿಯ ದಂಡನಾಯಕರನ್ನೂ ಬಂಧಿಸಿ ವಿಚಾರಣೆ ನಡೆಸಲು ನಮ್ಮ ಸರಕಾರ ಹಿಂಜರಿಯುವುದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಶೇ.40ರಷ್ಟು ಕಮಿಷನ್ ವಿಧಾನಸೌಧದಲ್ಲಿ ಮಾತ್ರವಲ್ಲ ಜಗನ್ನಾಥ ಭವನದಲ್ಲೂ ಕಮಿಷನ್ ವ್ಯವಹಾರ ಇತ್ತು ಎಂಬುದು ‘ಟಿಕೆಟ್ ಹಗರಣ’ದಿಂದ ತಿಳಿಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News