‘ಕೇರಳದಲ್ಲಿ ಕುರಿ, ಮೇಕೆ ಬಲಿ’ ತನಿಖೆಗೆ ಎಸ್‌ಐಟಿ ರಚಿಸಲಿ: ಎಚ್‍ಡಿಕೆ ಲೇವಡಿ

Update: 2024-06-03 12:55 GMT

ಬೆಂಗಳೂರು : ‘ಕೇರಳದಲ್ಲಿ ಕುರಿ, ಕೋಳಿ, ಮೇಕೆ, ಎಮ್ಮೆ ಬಲಿಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಇನ್ನೊಂದು ವಿಶೇಷ ತನಿಖಾ ತಂಡ (ಎಸ್‍ಐಟಿ) ರಚನೆ ಮಾಡಲಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ʼಸರಕಾರದವರು ಪ್ರತಿಯೊಂದಕ್ಕೂ ಎಸ್‍ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಾರೆ. ಬಲಿ ವಿಷಯಕ್ಕೂ ತನಿಖೆ ಮಾಡಿಸಲಿ. ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯನ್ನು ನಾನು ಮಾಧ್ಯಮಗಳ ಮೂಲಕವೇ ಗಮನಿಸಿದೆ. ಸಿಎಂ ಮತ್ತು ನನ್ನ ವಿರುದ್ಧ ಮಾಡಿಸುತ್ತಿರುವ ಶತ್ರು ಭೈರವಿ ಯಾಗ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ವಾಮಾಚಾರ ಎಂದರೆ ಸಾಮಾನ್ಯವೇ?’ ಎಂದು ಟೀಕಿಸಿದರು.

ಆಚಾರವಿಲ್ಲದ ನಾಲಿಗೆ: ಡಿಸಿಎಂ ಅವರು ಮಾಟ ಮಂತ್ರ ಎಂದು ಕಥೆ ಕಟ್ಟಿದ್ದಾರೆ. ಅವರ ಅಷ್ಟೂ ಹೇಳಿಕೆಯನ್ನು ಗಮನಿಸಿದ್ದೇನೆ. ಒಂದು ಮಾತನ್ನು ಹೇಳಲು ಬಯಸುತ್ತೇನೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು' ಎಂದು. ಪುರಂದರದಾಸರು ರಚಿಸಿರುವ ಪದ್ಯವಿದು. ಅವರು ಹೇಳಿಕೆ ಕೊಡುವ ಮುನ್ನ ತಾವು ಅಲಂಕರಿಸಿರುವ ಹುದ್ದೆಯ ಘನತೆ ಅರಿಯಬೇಕಿತ್ತು. ಅವರಿಗೆ ಆ ಸ್ಥಾನದ ಮೌಲ್ಯ ಇನ್ನೂ ಅರ್ಥವಾಗಿಲ್ಲ ಎಂದು ಅವರು ಕುಟುಕಿದರು.

ಅಪಪ್ರಚಾರ: 'ಲೋಕದ ಡೊಂಕ ನೀವೇಕೆ ತಿದ್ದುವಿರಿ' ಎಂದು ಈ ಹಿಂದೆ ಡಿಕೆಶಿ ಹೇಳಿದ್ದರು. ನಾನು ಅವರ ಮಾತನ್ನು ಅವರಿಗೇ ಹೇಳಲು ಬಯಸುತ್ತೇನೆ. ಮೊದಲು ನಿಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಿ. ಅದೆಂತದೋ ಶತ್ರು ಭೈರವಿ ಯಾಗವಂತೆ. ಅವರಿಗೆ ಭಕ್ತಿ ಇದೆಯಂತೆ. ಪವಿತ್ರ ಪುಣ್ಯಕ್ಷೇತ್ರ ಶ್ರೀರಾಜರಾಜೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಅವರೂ ಹೋಗಿದ್ದಾರೆ. ಅವರಿಗೆ ಈ ಯಾಗದ ಬಗ್ಗೆ ಪೂರ್ಣ ಮಾಹಿತಿ ಇರಬೇಕು. ಅಲ್ಲಿ ಯಾವ ರೀತಿಯ ಪೂಜೆ ನಡೆಯುತ್ತದೆ? ಆ ಕ್ಷೇತ್ರ ಮಹಿಮೆ ಏನು ಎನ್ನುವುದು ಅವರಿಗೆ ತಿಳಿದಿರುತ್ತದೆ ಅಲ್ಲವೇ? ಹಾಗಿದ್ದರೂ ಅವರು ಸುಳ್ಳು ಹೇಳಿ ಶ್ರೀರಾಜರಾಜೇಶ್ವರಿ ಅಮ್ಮನವರಿಗೆ ಅಪಪ್ರಚಾರ ಎಸಗಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೋಣ, ಮೇಕೆ ಕಡಿಯಲ್ಲ: ನಮ್ಮ ಕುಟುಂಬದ ಮೇಲೆ ಡಿಕೆಶಿ ಏನೆಲ್ಲಾ ಚಿತಾವಣೆ ನಡೆಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ನಮ್ಮ ಕುಟುಂಬದಲ್ಲಿ ಕುರಿ, ಮೇಕೆ, ಎಮ್ಮೆ, ಕೋಣ ಕಡಿಯೋದು ನಡೆದಿಲ್ಲ. ಅಂತಹ ಸಂಪ್ರದಾಯ ನಮ್ಮ ಕುಟುಂಬದಲ್ಲಿಲ್ಲ. ಪ್ರತಿ ತಿಂಗಳು ನಾನು ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ನಮ್ಮ ತಂದೆಯವರು ಪೂಜೆ ಮಾಡಿಸುತ್ತಾರೆ. ನಮ್ಮಿಬ್ಬರ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸುತ್ತೇವೆ. ಇನ್ನೊಬ್ಬರಿಗೆ ಕೇಡು ಬಯಸಲು ಪೂಜೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News