ಲೋಕಸಭಾ ಚುನಾವಣೆ | ಶೇ. 75ರಷ್ಟು ಕ್ಷೇತ್ರಗಳಿಗೆ ಒಬ್ಬರ ಹೆಸರು ಶಿಫಾರಸು: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: "ಲೋಕಸಭೆ ಚುನಾವಣೆ ಸಂಬಂಧ ಇಂದು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆ ಮಾಡಲಾಗಿದ್ದು, ಶೇ. 75ರಷ್ಟು ಕ್ಷೇತ್ರಗಳಲ್ಲಿ ಒಬ್ಬರ ಹೆಸರನ್ನು ಶಿಫಾರಸು ಮಾಡಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯ ಇಂದಿರಾಗಾಂಧಿ ಭವನದಲ್ಲಿ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಕುಮಾರ್ ಅವರು, ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾಯವಾಗಿದ್ದು, ಲೋಕಸಭೆ ಅಭ್ಯರ್ಥಿಗಳ ಹೆಸರುಗಳನ್ನು ಚರ್ಚಿಸಿದ್ದೇವೆ. ಕೆಲವು ಕಡೆಗಳಲ್ಲಿ ಒಬ್ಬರ ಹೆಸರು ಚರ್ಚೆಯಾದರೆ ಮತ್ತೆ ಕೆಲವೆಡೆ ಹಲವು ಹೆಸರು ಚರ್ಚೆಯಾಗಿದೆ ಎಂದರು.
ಇಂದು ಚರ್ಚೆಯಾದ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಗೆ ರವಾನಿಸುತ್ತೇವೆ. ಮಾ.14ರ ನಂತರ ದಿಲ್ಲಿಯಲ್ಲಿ ನಡೆಯುವ ಸಭೆಗೆ ನಾನು ಹಾಗೂ ಮುಖ್ಯಮಂತ್ರಿಗಳು ಹೋಗಿ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಮ್ಮ ಅಭಿಪ್ರಾಯ ಏನೇ ಇರಬಹುದು ಅಂತಿಮವಾಗಿ ನಮ್ಮ ಹೈಕಮಾಂಡ್ ನಾಯಕರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಸಮಿತಿ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಸಿಎಎಯನ್ನು ಕಾಂಗ್ರೆಸ್ ಖಂಡಿಸುತ್ತದೆ:
ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರಕ್ರಿಯಿಸಿದ ಅವರು, "ಈ ಬಗ್ಗೆ ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ನಿದ್ರೆ ಮಾಡುತ್ತಿತ್ತು. ಈಗ ಚುನಾವಣೆ ಬಂದ ಕಾರಣ, ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಹೊತ್ತಲ್ಲಿ ಶಾಂತಿ ಕದಡಲು ಇಂತಹ ಪ್ರಯತ್ನ ಮಾಡಲಾಗಿದೆ. ಇದಕ್ಕೂ ಮುನ್ನವೇ ಈ ವಿಚಾರವನ್ನು ಜಾರಿ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮ ರಕ್ಷಣೆ ಮಾಡಿಕೊಂಡು ಸಂವಿಧಾನದ ಆಶಯ ಕಾಪಾಡಿಕೊಂಡು ನಡೆಯಲಿದೆ" ಎಂದು ತಿಳಿಸಿದರು.