ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ನಿಯಮಾನುಸಾರ ಜಾಗ ಮೀಸಲು: ಸಚಿವ ಎಂ.ಬಿ.ಪಾಟೀಲ್

Update: 2024-02-26 14:09 GMT

ಬೆಂಗಳೂರು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ(ಕೆಐಎಡಿಬಿ)ಯಿಂದ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನು ಮುಂದೆ ದಲಿತ ಉದ್ಯಮಿಗಳಿಗೆ ನಿಯಮಾನುಸಾರವಾಗಿ ಶೇ.24.1ರಷ್ಟು ಜಾಗವನ್ನು ಮೀಸಲಿಡಲಾಗುವುದು. ಈ ವಿಚಾರದಲ್ಲಿ ನಿಯಮಗಳ ಉಲ್ಲಂಘನೆಗೆ ಅವಕಾಶ ಕೊಡುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸನ್ ನೇತೃತ್ವದ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು.

ಕೆಐಎಡಿಬಿ ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ನಿಯಮಾನುಸಾರ ಶೇ.24.1ರಷ್ಟು ಜಾಗವನ್ನು ಮೀಸಲಿಡಬೇಕು. ಆದರೆ ವಾಸ್ತವದಲ್ಲಿ ಇದು ಶೇ.16ರಷ್ಟು ಮಾತ್ರ ಜಾರಿಯಲ್ಲಿದೆ. ವಿಶೇಷವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ 12 ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ 653 ಎಕರೆ ಜಾಗ ಕೊಡುವುದು ಬಾಕಿ ಇದೆ ಎಂದು ಶ್ರೀನಿವಾಸ ಅವರು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಎಂ.ಬಿ.ಪಾಟೀಲ್, ಈಗಾಗಲೇ ಉದ್ದಿಮೆಗಳು ನೆಲೆಯೂರಿರುವ ಕೈಗಾರಿಕಾ ಪ್ರದೇಶಗಳಲ್ಲಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ, ಅಕ್ಕಪಕ್ಕದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ಶೇ.24.1ರಷ್ಟು ಜಾಗವನ್ನು ಮೀಸಲಿಡಲಾಗುವುದು. ಈ ವಿಷಯದಲ್ಲಿ ಸರಕಾರದ ಬದ್ಧತೆಯ ಬಗ್ಗೆ ಅನುಮಾನ ಬೇಡ. ಅಧಿಕಾರಿಗಳಿಗೆ ಈ ಬಗ್ಗೆ ತಕ್ಷಣವೇ ಸೂಚನೆ ಕೊಡಲಾಗುವುದು. ಜತೆಗೆ ನಿಮ್ಮ ಸಂಘದ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಆಶ್ವಾಸನೆ ನೀಡಿದರು.

ದಲಿತ ಉದ್ಯಮಿಗಳಿಗೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಅನ್ಯಾಯವಾಗಿಲ್ಲ. ಹಿಂದಿನ ಸರಕಾರಗಳ ಅವಧಿಯಲ್ಲಿ ಈ ಸಮಸ್ಯೆ ಉಂಟಾಗಿದೆ. ನಮ್ಮ ಸರಕಾರವು ದಲಿತರ ಪರವಾಗಿದೆ. ಇದಕ್ಕೆ ತಕ್ಕಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಅವರು ನುಡಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News