ಆನ್‍ಲೈನ್ ಮೂಲಕ ವಿವಾಹ ನೋಂದಣಿಗೆ ಅವಕಾಶ; ವಿವಾಹ ನೋಂದಣಿ ತಿದ್ದುಪಡಿಗೆ ಸಂಪುಟ ಸಭೆ ಅಸ್ತು

Update: 2024-02-01 16:01 GMT

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಹಿಂದೂ ವಿವಾಹಗಳ ನೋಂದಣಿ ತಿದ್ದುಪಡಿ 2024ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಂದಣಿ ವಿವಾಹ ಸರಳೀಕರಣಕ್ಕೆ ರಾಜ್ಯ ಸರಕಾರ ಸಮ್ಮತಿ ನೀಡಿದ್ದು, ಹಿಂದೂ ವಿವಾಹ ನೊಂದಣಿ ಕಾಯ್ದೆ 2024ಕ್ಕೆ ಒಪ್ಪಿಗೆ ಸೂಚಿಸಿದೆ ಎಂದರು.

ಈ ಸಂಬಂಧ ಕಚೇರಿಗಳಲ್ಲಿ ಮೊದಲು ವಿವಾಹ ನೋಂದಣಿ ಆಗುತ್ತಿದ್ದವು. ಈಗ ಆನ್‍ಲೈನ್ ಮೂಲಕ ನೋಂದಣಿಗೆ ಅವಕಾಶವಿದೆ. ಗ್ರಾಮ 1, ಕಾವೇರಿ 2, ಬಾಪೂಜಿ ಸೇವಾಕೇಂದ್ರಗಳಲ್ಲಿ ನೋಂದಣಿ ಮಾಡಬಹುದು. ಸಬ್ ರಿಜಿಸ್ಟರ್ ಕಚೇರಿಗೆ ಅಲೆಯುವಂತಿಲ್ಲ ಎಂದು ಅವರು ಉಲ್ಲೇಖಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲಾಗಿದೆ. ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 300 ಹಾಸಿಗೆ ಸಾಮಥ್ರ್ಯದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಹಾಲಿ ಕಟ್ಟಡವನ್ನು ನೆಲಸಮಗೊಳಿಸಿ ಅಂದಾಜು ರೂ. 126.90 ಕೋಟಿಗಳ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದರು.

2023-24ನೆ ಸಾಲಿನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 69,899 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 67,570 ಅಂಗನವಾಡಿ ಸಹಾಯಕಿಯರಿಗೆ ಸಮವಸ್ತ್ರವಾಗಿ ಒಬ್ಬರಿಗೆ ಎರಡು ಸೀರೆಗಳಂತೆ ಒಟ್ಟು 2,74,938 ಸೀರೆಗಳನ್ನು ಒಂದು ಸೀರೆಗೆ 500 ರೂ.ನಂತೆ ಒಟ್ಟು ರೂ. 13.75 ಕೋಟಿಗಳ ವೆಚ್ಚದಲ್ಲಿ ಟೆಂಡರ್ ಕರೆಯಲಾಗುವುದು. ಜತೆಗೆ, ಕಾರ್ಯಾದೇಶ ನೀಡುವ ಮೊದಲು ಕೇಂದ್ರ ಸರಕಾರದ ಪಾಲಿನ ಅನುದಾನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಷರತ್ತಿಗೊಳಪಡಿಸಿ, ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News