ರಾಯಚೂರಿನಲ್ಲಿ 10 ಎಕರೆ ಜಾಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ: ಜಾಗ ಗುರುತಿಸಲು ಅಧಿಕಾರಿಗಳಿಗೆ ಸಚಿವ ಬೋಸರಾಜು ಸೂಚನೆ
ಬೆಂಗಳೂರು, ಸೆ. 6: ರಾಯಚೂರು ನಗರದಲ್ಲಿ ಟ್ರಕ್ ಮತ್ತು ಲಾರಿಗಳ ಸಂಚಾರವನ್ನ ಸುಗಮಗೊಳಿಸುವ ನಿಟ್ಟಿನಲ್ಲಿ ಟ್ರಕ್ ಟರ್ಮಿನಲ್ ಅಗತ್ಯವಿದ್ದು, ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಶೀಘ್ರ ಗುರುತಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸೂಚನೆ ನೀಡಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಡಿ.ದೇವರಾಜ್ ಅರಸು ಟ್ರಕ್ ಟರ್ಮಿನಲ್ ಲಿ.ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉದ್ದೇಶಿತ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಟ್ರಕ್ ಟರ್ಮಿನಲ್ ನಗರದ ಹೊರಭಾಗದಲ್ಲಿ ನಿರ್ಮಾಣವಾದರೆ ಸೂಕ್ತ, ಈ ಟರ್ಮಿನಲ್ ನಿರ್ಮಾಣಕ್ಕೆ ಸುಮಾರು 10 ಎಕರೆ ಜಾಗದ ಅವಶ್ಯಕತೆಯಿದೆ ಎಂದರು.
ಹತ್ತು ಎಕರೆ ಜಾಗದಲ್ಲಿ ನಿರ್ಮಿಸಲಾಗುವ ಈ ಟ್ರಕ್ ಟರ್ಮಿನಲ್‍ನಲ್ಲಿ ಚಾಲಕರ ವಿಶ್ರಾಂತಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಯಚೂರು ನಗರದ ಹೊರಭಾಗದಲ್ಲಿ ಅಗತ್ಯ ಭೂಮಿಯನ್ನು ಶೀಘ್ರವಾಗಿ ಗುರುತಿಸುವಂತೆ ಹಾಗೂ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.