ಆಂಧ್ರಪ್ರದೇಶಕ್ಕೆ ಆನೆ ನೀಡುವ ಬಗ್ಗೆ ಶೀಘ್ರ ನಿರ್ಧಾರ : ಸಚಿವ ಈಶ್ವರ್‌ ಖಂಡ್ರೆ

Update: 2024-08-08 12:43 GMT

PC : x/@eshwar_khandre

ಬೆಂಗಳೂರು : ಆಂಧ್ರಪ್ರದೇಶದ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಕುಮ್ಕಿ ಆನೆಗಳನ್ನು ನೀಡುವಂತೆ ಕರ್ನಾಟಕಕ್ಕೆ ಮನವಿ ಮಾಡಿದ್ದು, ರಾಜ್ಯದ ಜನರ ಭಾವನೆಗೆ ಧಕ್ಕೆ ಆಗದಂತೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಆಂಧ್ರ ಮತ್ತು ರಾಜ್ಯದ ಅರಣ್ಯಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಆನೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ದಸರಾ ಆನೆಗಳನ್ನು ಯಾವುದೇ ರಾಜ್ಯಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಂಧ್ರದಲ್ಲಿಯೂ ಕಾಡಾನೆಗಳ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಯಶಸ್ಸು, ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಪಳಗಿಸುವುದು ಮತ್ತು ಮಾವುತರ ತರಬೇತಿ ಕುರಿತಂತೆ ಚರ್ಚಿಸಲು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ರಾಜ್ಯದ ಉನ್ನತ ಅರಣ್ಯಾಧಿಕಾರಿಗಳೊಂದಿಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ ನಡೆಯುವ ಮೈಸೂರು ದಸರಾ ಮಹೋತ್ಸವದಲ್ಲಿ ಆನೆಗಳೇ ಪ್ರಧಾನ ಆಕರ್ಷಣೆ. ಮೈಸೂರು ದಸರಾದಲ್ಲಿ ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿ ವಿಶ್ವ ವಿಖ್ಯಾತವಾಗಿದೆ. ಇದಕ್ಕಾಗಿ ಆನೆಗಳನ್ನು ಕಾಡಿನಿಂದ ನಾಡಿಗೆ ತರುವ ಗಜ ಪಯಣ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಆ.21ರಂದು ವೀರನಹೊಸಹಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಿಂದೆ ಆನೆ ಹಿಡಿಯಲು ಖೆಡ್ಡಾ ತೋಡಲಾಗುತ್ತಿತ್ತು. ಈಗ ಅರೆವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗುತ್ತದೆ.ಇದು ಕೂಡ ಅತ್ಯಂತ ಅಪಾಯಕಾರಿ. ಆನೆ ಕಾರ್ಯಾಚರಣೆ ವೇಳೆ ಆಪಾಯವೂ ಇರುತ್ತದೆ. ಕರ್ನಾಟಕದ ಹೆಸರಾಂತ ಶಾರ್ಪ್ ಶೂಟರ್ ವೆಂಕಟೇಶ್ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡುವಾಗ ಭೀಮ ಆನೆಗೆ ಬಲಿಯಾಗಿದ್ದು ನಿಮಗೆಲ್ಲಾ ತಿಳಿದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

2016-17ರಲ್ಲಿ ಉತ್ತರ ಖಂಡಕ್ಕೆ ಕರ್ನಾಟಕದಿಂದ 11 ಆನೆ ನೀಡಲಾಗಿತ್ತು. ಅದೇ ವರ್ಷ ಛತ್ತೀಸಗಡಕ್ಕೆ 6 ಮತ್ತು ಜಾರ್ಖಂಡ್ ಗೆ 3 ಆನೆ ನೀಡಲಾಗಿತ್ತು. 18-19ರಲ್ಲಿ ಪಶ್ಚಿಮ ಬಂಗಾಳಕ್ಕೆ 8 ಆನೆ, ಬಿಹಾರಕ್ಕೆ 4, ಉತ್ತರ ಪ್ರದೇಶಕ್ಕೆ 12 ಆನೆ ಕಳುಹಿಸಲಾಗಿತ್ತು. 2022-23ರಲ್ಲಿ ಉತ್ತರ ಪ್ರದೇಶಕ್ಕೆ 4, ಮಧ್ಯಪ್ರದೇಶಕ್ಕೆ 14, ಮಹಾರಾಷ್ಟ್ರಕ್ಕೆ 3 ಆನೆ ಕಳುಹಿಸಲಾಗಿತ್ತು ಎಂದು ಈಶ್ವರ ಖಂಡ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News