ಕಳೆದ ಐದು ವರ್ಷಗಳಲ್ಲಿ ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡದ ಕರ್ನಾಟಕದ ನಾಲ್ವರು ಸಂಸದರು

Update: 2024-02-13 07:45 GMT

ಅನಂತ ಕುಮಾರ್ ಹೆಗಡೆ (PTI)

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ 1,354 ಗಂಟೆಗಳ ಕಾಲ ಲೋಕಸಭಾ ಕಲಾಪಗಳು ನಡೆದಿದ್ದರೂ ಕರ್ನಾಟಕದ ನಾಲ್ವರು ಸಂಸದರಾದ ಅನಂತ ಕುಮಾರ್ ಹೆಗಡೆ, ವಿ.ಶ್ರೀನಿವಾಸ್ ಪ್ರಸಾದ್, ಬಿ.ಎನ್.ಬಚ್ಚೇಗೌಡ ಹಾಗೂ ರಮೇಶ್ ಜಿಗಜಿಗಣಗಿ ಸೇರಿದಂತೆ ಒಟ್ಟು 9 ಮಂದಿ ಸಂಸದರು ಒಮ್ಮೆಯೂ ಲೋಕಸಭೆಯಲ್ಲಿ ಮಾತನಾಡಿಲ್ಲ ಅಥವಾ ಚರ್ಚೆಯಲ್ಲಿ ಭಾಗಿಯಾಗಿಲ್ಲ ಎಂದು deccanherald.com ವರದಿ ಮಾಡಿದೆ.

ಕರ್ನಾಟಕದ ನಾಲ್ವರು ಸಂಸದರೊಂದಿಗೆ ರಾಜಕಾರಣಿಯಾಗಿ ಬದಲಾಗಿರುವ ನಟ ಸನ್ನಿ ಡಿಯೋಲ್ ಹಾಗೂ ಶತ್ರುಘ್ನ ಸಿನ್ಹಾ, ಅತುಲ್ ರಾಯ್, ಪ್ರಧಾನ್ ಬರುವಾ ಮತ್ತು ದಿಬ್ಯೇಂದು ಅಧಿಕಾರಿ ಕೂಡಾ ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡಿಲ್ಲ ಎಂದು ಲೋಕಸಭಾ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಈ ಒಂಬತ್ತು ಮಂದಿ ಸಂಸದರ ಪೈಕಿ ಮೂವರು ಸಂಸದರು ಯಾವುದೇ ಪ್ರಶ್ನೆಯನ್ನಾಗಲಿ ಅಥವಾ ವಾದವನ್ನಾಗಲಿ ಲೋಕಸಭೆಯಲ್ಲಿ ಮಂಡಿಸಿಲ್ಲ. ಉಳಿದ ಆರು ಸಂಸದರು ಮಾತ್ರ ಲೋಕಸಭೆಯಲ್ಲಿನ ಅವಕಾಶಗಳ ಪೈಕಿ ಕನಿಷ್ಠ ಒಂದು ಅವಕಾಶವನ್ನು ಬಳಸಿಕೊಂಡಿದ್ದಾರೆ.

ಸಂಸದ ರಮೇಶ್ ಜಿಗಜಿಗಣಗಿ ಯಾವುದೇ ಪ್ರಶ್ನೆಯನ್ನಾಗಲಿ ಅಥವಾ ವಾದವನ್ನಾಗಲಿ ಸದನದಲ್ಲಿ ಮಂಡಿಸಿಲ್ಲ. ಇದರೊಂದಿಗೆ ಲೋಕಸಭೆಯಲ್ಲಿ ಮಾತನ್ನೂ ಆಡಿಲ್ಲ. ಉಳಿದ ಮೂವರು ಕರ್ನಾಟಕದ ಸಂಸದರು ಲೋಕಸಭಾ ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೂ, ಒಂದಲ್ಲ ಒಂದು ರೀತಿ ಸದನದ ಕಲಾಪಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ಲೋಕಸಭಾ ಕಾರ್ಯಾಲಯದ ಮೂಲಗಳು ತಿಳಿಸಿವೆ.

ರಮೇಶ್ ಜಿಗಜಿಗಣಗಿಯವರಂತೆಯೇ ತಮ್ಮ ಸಿನಿಮಾ ಸಂಭಾಷಣೆಯಿಂದ ಜನಪ್ರಿಯರಾಗಿರುವ ನಟ ಶತ್ರುಘ್ನ ಸಿನ್ಹಾ ಕೂಡಾ ಲೋಕಸಭಾ ಕಲಾಪಗಳಲ್ಲಿ ಯಾವುದೇ ವಿಧದಲ್ಲೂ ಪಾಲ್ಗೊಂಡಿಲ್ಲ. ಇವರೊಂದಿಗೆ ಅತುಲ್ ರಾಯ್ ಕೂಡಾ ಲೋಕಸಭೆಯಲ್ಲಿ ಇದುವರೆಗೆ ಯಾವುದೇ ಮಾತುಗಳನ್ನಾಡಿಲ್ಲ. ಅತುಲ್ ರಾಯ್ ತಮ್ಮ ಸಂಸತ್ ಸದಸ್ಯತ್ವದ ಅವಧಿಯುದ್ದಕ್ಕೂ ಜೈಲಿನಲ್ಲಿದ್ದರೆ, ಎಪ್ರಿಲ್ 2022ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶತ್ರುಘ್ನ ಸಿನ್ಹಾ ಲೋಕಸಭೆ ಪ್ರವೇಶಿಸಿದ್ದರು.

ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡದ ಒಂಬತ್ತು ಸಂಸದರ ಪೈಕಿ ಆರು ಮಂದಿ ಸಂಸದರು ಆಡಳಿತಾರೂಢ ಬಿಜೆಪಿಗೆ ಸೇರಿದ್ದರೆ, ಶತ್ರುಘ್ನ ಸಿನ್ಹಾ ಹಾಗೂ ದಿಬ್ಯೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಮತ್ತೊಬ್ಬ ಸಂಸದ ಅತುಲ್ ರಾಯ್ ಬಿಎಸ್‌ಪಿಗೆ ಸೇರಿದ್ದಾರೆ. ಆದರೆ, ದಿಬ್ಯೇಂದು ಅಧಿಕಾರಿಗೆ ತನ್ನ ತಂದೆ ಹಾಗೂ ಸಂಸದ ಶಿಶಿರ್ ಅಧಿಕಾರಿ ಮೂಲಕ ಬಿಜೆಪಿಯೊಂದಿಗೆ ಸಂಪರ್ಕವಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಪ್ರತಿಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News