ಮುರುಘಾ ಮಠದ ಟ್ರಸ್ಟ್‌ ಆಸ್ತಿ ಮೌಲ್ಯ 1,600 ಕೋಟಿ ರೂ.ಗೂ ಅಧಿಕ; ನಿರ್ವಹಣೆ ಅಗತ್ಯ: ಆಡಳಿತಾಧಿಕಾರಿ ನೇಮಕ ಸಮರ್ಥಿಸಿ ಸರಕಾರದ ಮೇಲ್ಮನವಿ

Update: 2023-07-04 16:18 GMT

ಬೆಂಗಳೂರು, ಜು.4: ಚಿತ್ರದುರ್ಗ ಮುರುಘಾ ಮಠದ ಟ್ರಸ್ಟ್ ಆಸ್ತಿ ಮೌಲ್ಯ 1,600 ಕೋಟಿ ರೂ.ಗೂ ಹೆಚ್ಚಿದೆ, ಸಮರ್ಥ ನಿರ್ವಹಣೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು ಎಂದು ರಾಜ್ಯ ಸರಕಾರವು ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಸಮರ್ಥಿಸಿದೆ.

ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶ ವಜಾ ಮಾಡಬೇಕು ಎಂದು ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅವರು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದರು. ಮಠದ ಭಕ್ತ ಎಚ್.ಏಕನಾಥಯ್ಯ ಅವರು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠದ ಮುಂದೆ ಹಾಜರಾದ ಎಜಿ ಈ ವಿಚಾರ ಬಹಿರಂಗಪಡಿಸಿದರು.

ಆಡಳಿತಾಧಿಕಾರಿ ನೇಮಕಕ್ಕೆ ಸರಕಾರ ಏನಂದಿತು?; ಸರಕಾರ ಮಠ ಹಾಗೂ ಸಂಬಂಧಿತ ಸಂಸ್ಥೆಗಳ ಆಸ್ತಿಯ ಮೌಲ್ಯವು 1,600 ಕೋಟಿಗೂ ಹೆಚ್ಚಿದೆ. ಈ ಸಂಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕೆಂದರೆ ಅವುಗಳ ಮೇಲೆ ನಿರಂತರ ನಿಗಾ ಮತ್ತು ಸಮರ್ಥ ನಿರ್ವಹಣೆ ಅಗತ್ಯವಿದೆ. ಈ ನೆಲೆಯಲ್ಲಿ ಏಕಸದಸ್ಯ ಪೀಠದ ಆದೇಶಕ್ಕೆ ಅಸ್ತು ಎಂದರೆ ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳಿಗೆ ಸರಿಪಡಿಸಲಾರದಷ್ಟು ಹಾನಿಯಾಗುತ್ತದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವ ಮೂಲಕ ಆ ವ್ಯವಸ್ಥೆ ಮುಂದುವರಿಯಲು ಅನುಮತಿಸಬೇಕು ಎಂದು ಅಡ್ವೊಕೇಟ್ ಜನರಲ್ ಅವರು ಪೀಠಕ್ಕೆ ಮನವಿ ಮಾಡಿದರು.

ಮಠದ ಆಡಳಿತ ಮತ್ತು ಅದರ ಕೆಳಗೆ ಬರುವ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ದಾರಿಯನ್ನು ಆಕ್ಷೇಪಾರ್ಹವಾದ ಏಕಸದಸ್ಯ ಪೀಠದ ಆದೇಶವು ತೋರಿಸುವುದಿಲ್ಲ. ಲಿಂಗಾಯತ ಸಮುದಾಯದ ಪ್ರಮುಖರು ಒಟ್ಟಾಗಿ ಸೇರಿ ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಏಕಸದಸ್ಯ ಪೀಠ ಹೇಳಿದೆ. ಆದರೆ, ಮಠದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ವ್ಯವಸ್ಥಿತ ಚೌಕಟ್ಟು ಹಾಕಿಲ್ಲ. ಅಲ್ಲದೆ, ತನ್ನ ಮುಂದೆ ಎದುರಾದ ಪರಿಸ್ಥಿತಿಯನ್ನು ಪರಿಗಣಿಸಿ ಸಂವಿಧಾನದ 162ನೇ ವಿಧಿಯಡಿ ದೊರೆತಿರುವ ಕಾರ್ಯಕಾರಿ ಅಧಿಕಾರಿ ಬಳಸಿ ರಾಜ್ಯ ಸರಕಾರವು ಆಡಳಿತಾಧಿಕಾರಿ ನೇಮಕ ಮಾಡಲು ಸಮರ್ಥವಾಗಿದೆ.

ಅಗತ್ಯ ಧಾರ್ಮಿಕ ಆಚರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ಅಥವಾ ಮಧ್ಯಪ್ರವೇಶವನ್ನು ಆಡಳಿತಾಧಿಕಾರಿಯು ಮಾಡುವುದಿಲ್ಲ. ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳ ಆಡಳಿತವನ್ನು ಮಾತ್ರ ನೋಡಿಕೊಳ್ಳುತ್ತಾರೆ ಎಂದು ಸರಕಾರವು ಮೇಲ್ಮನವಿಯಲ್ಲಿ ಆಡಳಿತಾಧಿಕಾರಿ ನೇಮಕಾತಿಯನ್ನು ಸಮರ್ಥಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News