ದಸರಾ ಕವಿಗೋಷ್ಠಿ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿಲ್ಲ; ಎಲ್ಲಾ ಅಧಿಕಾರಿಗಳ ದರ್ಬಾರ್: ಎಚ್.ವಿಶ್ವನಾಥ್ ಅಸಮಾಧಾನ

Update: 2023-10-17 13:56 GMT

ಮೈಸೂರು: ಮೈಸೂರು ದಸರಾದಲ್ಲಿನ ದೀಪಲಂಕಾರ ನೋಡಿದರೆ ದಸರಾ ಚೆನ್ನಾಗಿದೆ ಅನಿಸುತ್ತದೆ.ಇನ್ನುಳಿದ ಕಾರ್ಯಕ್ರಮಗಳನ್ನು ನೋಡಿದರೆ ದಸರಾ ಕಳೆಗುಂದಿದ್ದು, ಸಂಪೂರ್ಣ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʼಮೈಸೂರು ದಸರಾಗೆ ತನ್ನದೇ ಅದಂತಹ ಮಹತ್ವ ಇದೆ. ಮೈಸೂರು ಮಹರಾಜರು ಸಂಸ್ಕೃತಿ, ಸಂಸ್ಕಾರ ಕಲೆ,ಸಂಗೀತ, ನೃತ್ಯ, ನಾಟಕ ಎಲ್ಲವೂ ಮನುಷ್ಯನಿಗೆ ಬದುಕು ನೀಡುವಂತಾಗಿರಬೇಕು ಎನ್ನುತ್ತಿದ್ದರು. ಅಂತಹದರಲ್ಲಿ ಎಷ್ಟು ಚೆನ್ನಾಗಿ ದಸರಾ ಮಾಡಬಹುದಿತ್ತು. ದಸರಾದ ಯಾವ ಕಾರ್ಯಕ್ರಮಗಳಲ್ಲೂ ಜನಪ್ರತಿನಿಧಿಗಳ ಉಪಸ್ಥಿತಿ ಇಲ್ಲಾ, ಎಲ್ಲಾ ಅಧಿಕಾರಿಗಳ ದರ್ಬಾರ್ ಆಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.

ʼಉದಾಹರಣೆಗೆ ನಾನು ಸಾಹಿತ್ಯವಲಯವನ್ನು ವಿಧಾನಪರಿಷತ್ ನಲ್ಲಿ ಪ್ರತಿನಿಧಿಸುತ್ತಿದ್ದೇನೆ. ನನ್ನನ್ನು ಹೇಗೆ ಉಪಯೋಗಿಸಬೇಕಿತ್ತು. ಆದರೆ ಕವಿಗೋಷ್ಠಿ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿಲ್ಲ. ಹೀಗೆ ಯಾರ ಅಭಿಪ್ರಾಯನ್ನು ಪಡೆಯದೆ ಅಧಿಕಾರಿಗಳ ಇಷ್ಟದಂತೆ ದಸರಾ ಕಾರ್ಯಕ್ರಮಗಳು ನಡೆಯುತ್ತಿದೆʼ ಎಂದರು.

ʼದಸರಾ ಆರಂಭಕ್ಕೂ ಮುನ್ನ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ಸಲಹೆ ಸೂಚನೆ ಪಡಯಬೇಕಿತ್ತು.ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ 7 ಬಾರಿ ದಸರಾ ಆಚರಣೆ ಮಾಡಿದ್ದೇನೆ. ಮೊದಲು ಚಾಮುಂಡೇಶ್ವರಿ ತಾಯಿ ಮೆರವಣಿಗೆ ಅರಮನೆ ಆವರಣದೊಳಗೆ ನಡೆಯುತ್ತಿತ್ತು. ನಾವು ಅದನ್ನು ಹೊರಗೆ ತಂದು, ಕಲೆ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದವರಿಗೆ ಅವಕಾಶ ಕಲ್ಪಿಸಿದೆವುʼ ಎಂದು ಹೇಳಿದರು.

ʼಅರಮನೆ ಆವರಣದಲ್ಲಿ ಬೀಬ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿ ಬಾಂಬೆ, ಹೈದ್ರಬಾದ್, ಮದ್ರಾಸ್, ತಂಜಾವೂರ್ ಗಳಿಂದ ದೊಡ್ಡ ದೊಡ್ಡ ಸಂಗೀತಗಾರರು ಕಲಾವಿದರನ್ನು ಕರೆಸುತ್ತಿದ್ದೆವು. ಅವರ್ಯಾರು ಹಣಕ್ಕಾಗಿ ಬರುತ್ತಿರಲಿಲ್ಲ, ದಸರಾದಲ್ಲಿ ಅವಕಾಶ ಸಿಕ್ಕಿತ್ತಲ್ಲ ಎಂದು ಸಂತೋಷದಿಂದ ಬರುತ್ತಿದ್ದರು. ಅವರಿಗೆ ವಿಮಾನ ಖರ್ಚು, ಉಳಿದುಕೊಳ್ಳಲು ವ್ಯವಸ್ಥೆ ಮತ್ತು ಸ್ವಲ್ಪ ಗೌರವಧನ ನೀಡಿದರೆ ಸಾಕು. ಆದರೆ ಈಗ ನಡೆಯುತ್ತಿರುವುದು ಏನು? ನೀನು ಸ್ವಲ್ಪ ತಗೊ ನನಗೆ ಸ್ವಲ್ಪ ಕೊಡು ಎನ್ನುವಂತಾಗಿರುವುದು ನಾಚಿಕೆಗೇಡುʼ ಎಂದು ಕಿಡಿಕಾರಿದರು.

ʼಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಬರಗಾಲ ಆವರಿಸಿತ್ತು. ದಸರಾ ಹೇಗೆ ಮಾಡುವುದು ಎಂದಾಗ ಪ್ರಾಯೋಜಕತ್ವ ಕರೆದು ಬಹಳ ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಿದೆವು. ಪ್ರಾಯೋಜಕತ್ವದಲ್ಲಿ ಬಂದ ಹಣ ಖರ್ಚು ಮಾಡಿ. ಇನ್ನೂ 3.5 ಕೋಟಿ ಹಣ ಸರ್ಕಾರಕ್ಕೆ ಕೊಟ್ಟೆವು. ಈಗ ಪ್ರಾಯೋಜಕತ್ವ ಪಡೆದು ದಸರಾ ಮಾಡುವುದು ಬಿಟ್ಟು ಸರ್ಕಾರ ಏಕೆ 30 ಕೋಟಿ ರೂ. ಖರ್ಚು ಮಾಡಬೇಕುʼ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು, ಜಿಲ್ಲಾ ಮಂತ್ರಿಯನ್ನು ಕರೆದು ಪ್ರಾಯೋಜಕತ್ವದವರ ಸಭೆ ಮಾಡಿ ಅವರಿಗೆ ಇಂತಿತಹ ಕಾರ್ಯಕ್ರಮ ಮಾಡಿಕೊಡಿ ಎಂದು ಹೇಳಬೇಕಿತ್ತು. ಅವರು ತಮ್ಮ ಪ್ರಚಾರವನ್ನು ಮಾಡಿಕೊಂಡು ದಸರಾ ಆಚರಣೆಯನ್ನು ಮಾಡುತ್ತಿದ್ದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News