ನಾಳೆಯಿಂದ (ಆ.1) ‘ನಂದಿನಿ’ ಹಾಲು, ಮೊಸರು ಪ್ರತಿ ಲೀಟರ್ ಗೆ 3 ರೂ. ಹೆಚ್ಚಳ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮಂಗಳವಾರ (ಆ.1)ದಿಂದ ಅನ್ವಯವಾಗುವಂತೆ ನಂದಿನಿ ಹಾಲು, ಮೊಸರು ಹಾಗೂ ಮಜ್ಜಿಗೆಯು ದುಬಾರಿಯಾಗಲಿದೆ.

Update: 2023-07-31 16:22 GMT

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮಂಗಳವಾರ (ಆ.1)ದಿಂದ ಅನ್ವಯವಾಗುವಂತೆ ನಂದಿನಿ ಹಾಲು, ಮೊಸರು ಹಾಗೂ ಮಜ್ಜಿಗೆಯು ದುಬಾರಿಯಾಗಲಿದೆ. ಇದರ ಪರಿಣಾಮವಾಗಿ ಹೊಟೇಲ್‍ಗಳಲ್ಲಿನ ತಿಂಡಿ, ತಿನಿಸುಗಳ ಬೆಲೆಯೂ ಶೇ.10ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ರಾಜ್ಯ ಸರಕಾರವು ಆ.1ರಿಂದ ಅನ್ವಯವಾಗುವಂತೆ ‘ನಂದಿನಿ’ಯ ಎಲ್ಲ ಮಾದರಿ ಹಾಲು ಪ್ರತಿ ಲೀಟರ್ ಹಾಗೂ ಮೊಸರು ಮಾರಾಟ ದರವನ್ನು ಪ್ರತಿ ಕೆಜಿಗೆ 3 ರೂ.ಗಳಂತೆ ಹೆಚ್ಚಿಸಿ ಪರಿಷ್ಕರಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಟೋನ್ಡ್ ಹಾಲು(ನೀಲಿ ಪೊಟ್ಟಣ) ಪ್ರತಿ ಲೀಟರ್ 39 ರೂ.ಗಳಿಂದ 42 ರೂ.ಗಳಿಗೆ, ಹೋಮೋಜಿನೈಸ್ಡ್ ಟೋನ್ಡ್ ಹಾಲು 40 ರೂ.ಗಳಿಂದ 43 ರೂ.ಗಳಿಗೆ, ಹಸುವಿನ ಹಾಲು(ಹಸಿರು ಪೊಟ್ಟಣ) 43 ರೂ. ಗಳಿಂದ 46 ರೂ.ಗಳಿಗೆ, ಶುಭಂ(ಕೇಸರಿ ಪೊಟ್ಟಣ)/ಸ್ಪೆಷಲ್ ಹಾಲು 45 ರೂ.ಗಳಿಂದ 48 ರೂ.ಗಳಿಗೆ, ಮೊಸರು ಪ್ರತಿ ಕೆಜಿಗೆ 47 ರೂ.ಗಳಿಂದ 50 ರೂ.ಗಳಿಗೆ ಹಾಗೂ ಮಜ್ಜಿಗೆ ಪ್ರತಿ 200 ಮಿಲಿ ಪೊಟ್ಟಣ 8 ರೂ.ಗಳಿಂದ 9 ರೂ.ಹೆಚ್ಚಿಸಲಾಗಿದೆ.

ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‍ಗೆ 3 ರೂ.ಗಳಂತೆ ಹೆಚ್ಚಳ ಮಾಡಿದ ನಂತರವು, ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಹಾಲಿನ ಬ್ರ್ಯಾಂಡ್‍ಗಳ ಮಾರಾಟ ದರಕ್ಕೆ ಹೋಲಿಸಿದಾಗ್ಯೂ ನಂದಿನಿ ಟೋನ್ಡ್ ಹಾಲಿನ ಮಾರಾಟ ದರವೆ ಕಡಿಮೆ ಇದೆ. ನಂದಿನಿ ಟೋನ್ಡ್ ಹಾಲು ಪ್ರತಿ ಲೀಟರ್ 42 ರೂ.ಗಳಾದರೆ, ಕೇರಳದಲ್ಲಿ ಪ್ರತಿ ಲೀಟರ್ ಹಾಲು 50 ರೂ., ದಿಲ್ಲಿಯಲ್ಲಿ 54 ರೂ., ಗುಜರಾತ್‍ನಲ್ಲಿ 54 ರೂ., ಮಹಾರಾಷ್ಟ್ರದಲ್ಲಿ 54 ರೂ. ಹಾಗೂ ಆಂಧ್ರಪ್ರದೇಶದಲ್ಲಿ ಒಂದು ಲೀಟರ್ ಹಾಲಿಗೆ 56 ರೂ.ದರ ಇದೆ ಎಂದು ಕೆಎಂಎಫ್(ರಾಜ್ಯ ಹಾಲು ಮಹಾಮಂಡಳಿ) ತಿಳಿಸಿದೆ.

ಕೆಎಂಎಫ್ ಮಾರುಕಟ್ಟೆಯಲ್ಲಿರುವ ಇತರೆ ಎಲ್ಲ ಹಾಲಿನ ಮಾರಾಟ ದರಕ್ಕಿಂತ ಅತಿ ಕಡಿಮೆ ದರದಲ್ಲಿ ನಂದಿನಿ ಹಾಲನ್ನು ಒದಗಿಸುತ್ತಿರುವುದನ್ನು ರಾಜ್ಯದ ಗ್ರಾಹಕರು ಗಮನಿಸಿ ಈ ಹಿಂದಿನಂತೆಯೆ ಸಹಕರಿಸಿ ಪ್ರೋತ್ಸಾಹ ನೀಡಬೇಕು ಎಂದು ಹಾಲು ಮಹಾಮಂಡಳಿಯ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಎಂ.ಕೆ. ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News