ಗ್ಯಾರಂಟಿ ಜಾರಿ ಸಮಿತಿ ಅಲ್ಲ, ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರಂಟಿ ನೀಡುವ ಸಮಿತಿ: ಆರ್. ಅಶೋಕ್

Update: 2024-01-11 05:06 GMT

Photo: facebook/ R. Ashoka

ಬೆಂಗಳೂರು: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಗ್ಯಾರಂಟಿ ಜಾರಿ ಸಮಿತಿ ಅಲ್ಲ ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರಂಟಿ ನೀಡುವ ಸಮಿತಿ’ ಎಂದು ಟೀಕಿಸಿದ್ದಾರೆ.

"ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ" ಎಂಬ ಗಾದೆ ಮಾತಿನಂತೆ ಈಗಾಗಲೇ ಅವೈಜ್ಞಾನಿಕ ಗ್ಯಾರಂಟಿಗಳ ಭಾರವನ್ನು ಹೊರಲಾಗದೆ ಬೆನ್ನು ಮೂಳೆ ಮುರಿದಂತಾಗಿರುವ ಸರ್ಕಾರಕ್ಕೆ, ಗ್ಯಾರೆಂಟಿ ಜಾರಿ ಸಮಿತಿ ಎಂಬ ಮತ್ತೊಂದು ಹೊರೆ ಹೊರಿಸಲು ಸಿಎಂ ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಜಾರಿಗೆ ಮುಖ್ಯಮಂತ್ರಿ ಸಹಿತ, 34 ಕ್ಯಾಬಿನೆಟ್ ಸಚಿವರು, ಆರ್ಥಿಕ,ರಾಜಕೀಯ, ಮಾಧ್ಯಮ ಸಲಹೆಗಾರರು, ಜಿಲ್ಲಾಡಳಿತಗಳು ಸೇರಿದಂತೆ ಇಡೀ ಆಡಳಿತ ಯಂತ್ರವೇ ಇರುವಾಗ ಪ್ರತ್ಯೇಕ ಸಮಿತಿಯ ಅಗತ್ಯ ಏನಿದೆ? ಸಂಪುಟ ದರ್ಜೆ ಸ್ಥಾನಮಾನದ ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದ ಐವರು ಉಪಾಧ್ಯಕ್ಷರು ಸೇರಿದಂತೆ 31 ಸದಸ್ಯರ ಸಮಿತಿಯ ಸಂಬಳ ಸಾರಿಗೆ ಖರ್ಚಿನಿಂದ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಹೊರೆಯಾಗಲಿದೆ. ತಮ್ಮ ಪಕ್ಷದ ಅತೃಪ್ತ ಶಾಸಕರನ್ನು, ಪ್ರಮುಖ ಕಾರ್ಯಕರ್ತರನ್ನು ಲೋಕಸಭಾ ಚುನಾವಣೆಯ ಕೆಲಸಕ್ಕೆ ಬಳಸಿಕೊಳ್ಳಲು ರಾಜ್ಯದ ಸಾರ್ವಜನಿಕ ಹಣ ಏಕೆ ದುರ್ಬಳಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಗ್ಯಾರೆಂಟಿ ಜಾರಿಯೇ ಹೊರೆಯಾಗಿ ಅಭಿವೃದ್ಧಿಗೆ ಹಣ ಇಲ್ಲದಿರುವಾಗ ಕಂಡ ಕಂಡವರಿಗೆ ಗೂಟದ ಕಾರು ಕೊಡಲು ರಾಜ್ಯದ ಖಜಾನೆ ಏನು ಕಾಂಗ್ರೆಸ್ ಪಕ್ಷದ ಆಸ್ತಿ ಎಂದುಕೊಂಡಿದ್ದೀರಾ? ಸಚಿವರು, ಆಡಳಿತ ಯಂತ್ರದ ಮೂಲಕ ಗ್ಯಾರೆಂಟಿ ಜಾರಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಸುಮ್ಮನೆ ರಾಜ್ಯದ ಬೊಕ್ಕಸವನ್ನ ಪೋಲು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News