ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ | ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Update: 2024-05-28 15:22 IST
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ | ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Photo: PTI

  • whatsapp icon

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೋ, ವಿಡಿಯೋಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಆರೋಪಿಗಳಾದ ನವೀನ್‌ ಗೌಡ ಅಲಿಯಾಸ್‌ ಎನ್‌.ಆರ್‌. ನವೀನ್‌ ಕುಮಾರ್‌, ಎನ್‌.ಕಾರ್ತಿಕ್‌, ಬಿ.ಸಿ.ಚೇತನ್ ಕುಮಾರ್‌ ಮತ್ತು ಎಚ್‌.ವಿ. ಪುಟ್ಟರಾಜು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ(ಜೂನ್ 3) ಮುಂದೂಡಿದೆ.

ಆರೋಪಿಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರಿಂದ ಮನವಿ ಕಾಲಾವಕಾಶ ಕೋರಿದರು. ಇದೇ ವೇಳೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ದೂರುದಾರ ಎಂ.ಜಿ. ಪೂರ್ಣಚಂದ್ರ ತೇಜಸ್ವಿ, ತಮ್ಮ ವಕೀಲರನ್ನು ನಿಯೋಜಿಸಿಕೊಳ್ಳಲು ಕೋರಿದರು. ಅದನ್ನು ಪರಿಗಣಿಸಿ ನ್ಯಾಯಾಲಯ ಸೋಮವಾರಕ್ಕೆ ವಿಚಾರಣೆ ಮುಂದೂಡಿತು.

ಈ‌ ಸಂದರ್ಭದಲ್ಲಿ ಆರೋಪಿ ಬಿ.ಸಿ. ಚೇತನ್ ಪರ ವಕೀಲರು, ಎಸ್ ಐಟಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ಸೂಚಿಸುತ್ತಿದ್ದಾರೆ.‌ ಇದರಿಂದ ಬಂಧನ ಭೀತಿ ಇದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರಕರಣ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಹಾಗೂ ಬಿಜೆಪಿ ಚುನಾವಣಾ ಏಜೆಂಟ್‌ ಆಗಿದ್ದ ಎಂ.ಜಿ. ಪೂರ್ಣಚಂದ್ರ ತೇಜಸ್ವಿ, ಹಾಸನ ಸಿಇಎನ್‌ ಪೊಲೀಸ್‌ ಠಾಣೆಗೆ 2024ರ ಏ.23ರಂದು ದೂರು ನೀಡಿದ್ದರು. ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ಏ.26ರಂದು ನಿಗದಿಯಾಗಿತ್ತು. ಆರೋಪಿಗಳಾದ ನವೀನ್‌ ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ರಿಂದ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋಗಳನ್ನು ಒಳಗೊಂಡ ಸಿಡಿ ಹಾಗೂ ಪೆನ್‌ಡ್ರೈವ್‌ ಸಿದ್ಧಪಡಿಸಿಕೊಂಡಿದ್ದಾರೆ. ಬಳಿಕ ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸ್‌ಪ್‌/ಮೊಬೈಲ್‌ಗಳಲ್ಲಿ ತೋರಿಸಿ ಜನರಿಗೆ ದಿಕ್ಕು ತಪ್ಪಿಸಿ ಪ್ರಜ್ವಲ್‌ ರೇವಣ್ಣಗೆ ಮತ ಹಾಕದಂತೆ ಪ್ರಚೋದಿಸಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ನ್ಯಾಯಯುತ ಮತದಾನ ನಡೆಯುವುದನ್ನು ತಪ್ಪಿಸುವ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News