ಆ.27ರಂದು ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆ. 15: 77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಮುಖ್ಯಮಂತ್ರಿಗಳು ತೆರೆದ ಜೀಪ್ ನಲ್ಲಿ ಪರೇಡ್ ವೀಕ್ಷಣೆ ಮಾಡಿದರು. ಇದಕ್ಕೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ನಡೆದ ಧ್ವಜಾರೋಹಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಅವರು, ʼʼಬಡತನ ನಿವಾರಣೆಗೆ ನೇರ ನಗದು ನೀಡುವ ಕಾರ್ಯಕ್ರಮಗಳು ಅತ್ಯುತ್ತಮ ಪರಿಹಾರ ನೀಡಬಲ್ಲವು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ‘ಗೃಹಲಕ್ಷ್ಮಿ’ ಯೋಜನೆಯನ್ನು ಜಾರಿಗೆ ತರುತ್ತಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ದಿನಾಂಕ ಆಗಸ್ಟ್ 27 ರಂದು ಮಹಿಳೆಯರ ಖಾತೆಗೆ ಮಾಸಿಕ 2000 ರೂ.ಗಳನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೆ 1.08 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆʼʼ ಎಂದು ತಿಳಿಸಿದರು.
ʼʼನಮ್ಮ ಸರ್ಕಾರದ ಈ ಗ್ಯಾರಂಟಿ ಯೋಜನೆಗಳಿಂದ ಬಡ, ಮಧ್ಯಮ ವರ್ಗದ ಕುಟುಂಬಗಳ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಬರಲಿದೆ. ಜಾತಿ, ಮತ, ವರ್ಗ, ವರ್ಣ ಭೇದವಿಲ್ಲದೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆʼʼ ಎಂದು ಹೇಳಿದರು.