ಸಂಸತ್ ದಾಳಿ ಪ್ರಕರಣ: ದಿಲ್ಲಿ ಪೊಲೀಸರಿಂದ ಮನೋರಂಜನ್ ಕುಟುಂಬದ ವಿಚಾರಣೆ ಮುಂದುವರಿಕೆ
ಮೈಸೂರು: ಸಂಸತ್ ದಾಳಿ ಪ್ರಕರಣದಲ್ಲಿ ಬಂಧನವಾಗಿರುವ ಮೈಸೂರಿನ ಮನೋರಂಜನ್ ಅವರ ಪೊಷಕರನ್ನು ದಿಲ್ಲಿ ಪೊಲೀಸರು ಎರಡನೇ ದಿನವೂ ವಿಚಾರಣೆ ಮುಂದುವರೆಸಿ ಅವರ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ವಿಜಯನಗರದ ಎರಡನೇ ಹಂತದಲ್ಲಿರುವ ಮನೋರಂಜನ್ ನಿವಾಸಕ್ಕೆ ಮಂಗಳವಾರ ಓರ್ವ ಹಿರಿಯ ಅಧಿಕಾರಿ ಇಬ್ಬರು ಸಹಾಯಕರು, ಓರ್ವ ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾಲ್ವರ ತಂಡ ವಿಚಾರಣೆ ನಡೆಸಿದೆ. ಮಧ್ಯಾಹ್ನ 2 ರಿಂದ 3.30ರವರೆಗೆ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡು ಹೇಳಿಕೆಗಳನ್ನು ದಾಖಲಿಸಿಕೊಂಡರು.
ಮನೋರಂಜನ್ ತಂದೆ ದೇವೇರಾಜೇಗೌಡ, ತಾಯಿ ಮತ್ತು ಸಹೋದರಿಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿ ಮಾಹಿತಿ ಕಲೆಹಾಕಿದರು.
ಮನೋರಂಜನ್ ಕೊಠಡಿಯನ್ನು ಮಹಜರು ನಡೆಸಿದ ಪೊಲೀಸರು, ಇದೇ ವೇಳೆ ಮನೋರಂಜನ್ ವೀಸಾ, ಪಾಸ್‍ಪೋರ್ಟ್ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ವಿಚಾರಣೆ ವೇಳೆ ಮನೋರಂಜನ್ ಮತ್ತು ತಂದೆ ದೇವರಾಜೇಗೌಡರ ಹಣದ ಮೂಲ, ಮನೆಯಲ್ಲಿ ಆತನ ವರ್ತನೆ ಯಾವ ರೀತಿ ಇತ್ತು. ಭೇಟಿ ಮಾಡಲು ಬರುತ್ತಿದ್ದ ಸ್ನೇಹಿತರು, ಮೊಬೈಲ್ ಮೂಲಕ ಯಾರೊಂದಿಗೆ ಮಾತಾಡುತ್ತಿದ್ದ ಎಂಬಿತ್ಯಾದಿ ಮಾಹಿತಿಗಳನ್ನು ಪಡೆದಿದ್ದಾರೆ.
ಮಾಧ್ಯಮದ ಮುಂದೆ ಹೇಳಿಕೆ ನೀಡದಂತೆ ಹಾಗೂ ಯಾವುದೇ ಮಾಹಿತಿಯನ್ನು ಗೌಪ್ಯವಾಗಿ ಇರಿಸಿ ತನಿಖೆ ಸಹಕಾರ ನೀಡುವಂತೆ ಪೊಲೀಸರು ದೇವರಾಜೇಗೌಡ ಅವರಿಗೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಮೈಸೂರು ಗುಪ್ತಚರ ಇಲಾಖೆ ಅಧಿಕಾರಿಗಳು ಇದ್ದರು.