ಪಾದಚಾರಿ ಮಾರ್ಗ ಒತ್ತುವರಿ, ಸ್ವಯಂ ಪ್ರೇರಿತ ಅರ್ಜಿ ದಾಖಲು: ಹೈಕೋರ್ಟ್

Update: 2024-01-30 16:35 GMT

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸದ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ತೆರವು ಕಾರ್ಯ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ತ್ಯಾಗರಾಜನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯ ಪೀಠ, ಈ ಎಚ್ಚರಿಕೆ ನೀಡಿದೆ.

ಪಾಲಿಕೆಯು ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತಿದೆ. ಸರಿಯಾದ ರಸ್ತೆ, ಪಾದಚಾರಿ ಮಾರ್ಗಗಳಿಗಾಗಿ ತೆರಿಗೆ ಪಾವತಿಸಲಾಗುತ್ತಿದೆ. ಆದರೆ, ಪಾಲಿಕೆ ಪಾದಚಾರಿ ಮಾರ್ಗಗಳ ಸುಧಾರಣೆಗೆ ಎಂದಿಗೂ ಮುಂದಾಗುತ್ತಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೆ, ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ಕುರಿತಂತೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಎಲ್ಲ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ಸಂಬಂಧ ಆದೇಶವನ್ನು ನೀಡಲಾಗುವುದು. ಈ ಪ್ರಕ್ರಿಯೆ ಯಾರ ವಿರುದ್ಧವೂ ಅಲ್ಲ. ಸಾರ್ವಜನಿಕರಿಗೆ ಸಹಕಾರಿಯಾಗುವುದಕ್ಕಾಗಿ ಮಾತ್ರ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿತು.

ಕೆಲವು ಪಾದಚಾರಿ ಮಾರ್ಗಗಳಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ತಕ್ಷಣ ಎಲ್ಲ ಪಾದಚಾರಿ ಮಾರ್ಗಗಳನ್ನು ತೆರವು ಮಾಡಬೇಕು. ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.1ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು? ಪಾದಚಾರಿ ಮಾರ್ಗದಲ್ಲಿದ್ದ ಬಿಡಾಡಿ ದನಗಳ ದಾಳಿಯಿಂದ ಅರ್ಜಿದಾರರ ತಾಯಿಗೆ ಪೆಟ್ಟಾಗಿದೆ. ಪಾದಚಾರಿ ಮಾರ್ಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿದ ಬಳಿಕ ಅದಕ್ಕೆ ಕಬ್ಬಿಣದ ತಡೆಗೋಡೆ(ಗ್ರಿಲ್)ಯನ್ನು ಹಾಕಿ ಸಂರಕ್ಷಣೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು. ತಾಯಿಗೆ ಆದ ಅಪಘಾತಕ್ಕೆ ಪರಿಹಾರವಾಗಿ 15ಲಕ್ಷ ರೂ.ಪರಿಹಾರ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News