ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು: ನಟ ಶಿವರಾಜ್‌ಕುಮಾರ್ ಒತ್ತಾಯ

Update: 2023-10-22 12:54 GMT

ಮಂಡ್ಯ, ಅ.22: ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಿ ಎರಡು ರಾಜ್ಯಗಳ ಜತೆ ಮಾತುಕತೆ ನಡೆಸಿದರೆ ಕಾವೇರಿ ಜಲ ವಿವಾದ ಬಗೆಹರಿಯುತ್ತದೆ. ಆದ್ದರಿಂದ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಹಿರಿಯ ನಟ ಶಿವರಾಜ್‍ಕುಮಾರ್ ಹೇಳಿದ್ದಾರೆ.

ಮದ್ದೂರು ತಾಲೂಕು ವಳೆಗೆರೆಹಳ್ಳಿ ಗ್ರಾಮದಲ್ಲಿ ಮಾನಸ ಎಜುಕೇಷನ್ ಟ್ರಸ್ಟ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡೀಗೌಡ ಪ್ರತಿಷ್ಠಾನದ ವತಿಯಿಂದ ರವಿವಾರ ನಡೆದ ಕಾರ್ಯಕ್ರಮದಲ್ಲಿ ಕಲಾಕೌಸ್ತಭ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕಾವೇರಿ ವಿಚಾರದಲ್ಲಿ ರೈತರಪರ ಚಿತ್ರರಂಗ ಸದಾ ಜತೆಯಲ್ಲಿ ನಿಲ್ಲುತ್ತದೆ. ಹೋರಾಟದ ಮೂಲಕ ಆಳುವ ಸರಕಾರಗಳ ಮೇಲೆ ಒತ್ತಡ ತರಬೇಕು. ದೊಡ್ಡಮಟ್ಟದ ಹೋರಾಟ ರೂಪಿಸಬೇಕು. ಆದರೆ, ಹೋರಾಟ ಶಾಂತಿಯುತವಾಗಿರಬೇಕು ಎಂದು ಅವರು ಹೇಳಿದರು.

ನಾನು ರಾಜಕೀಯ ಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ. ಸಿನೆಮಾ ಕ್ಷೇತ್ರದಲ್ಲಿ ಸಂತೃಪ್ತಿ ಇದೆ. ಪತ್ನಿ ಗೀತಾ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರಲಿದ್ದಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ವರ್ದೆ ಮಾಡುತ್ತಾರೋ ಗೊತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ನಾನು ಅವರ ಜತೆಗಿರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಕರಡಿಗೌಡರ ಹೆಸರಲ್ಲಿ ನನಗೆ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತೋಷ ತಂದಿದೆ. ‘ಘೋಸ್ಟ್’ ಚಲನಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿಭಿನ್ನ ಮಾದರಿಯ ಚಿತ್ರವನ್ನು ಕನ್ನಡಿಗರು ಸ್ವೀಕರಿಸಿರುವುದು ಖುಷಿಯ ವಿಚಾರ ಎಂದು ಅವರು ಪ್ರತಿಕ್ರಿಯಿಸಿದರು.

ಮೈಸೂರಿನ ದೀನಬಂಧು ಮಕ್ಕಳ ಮನೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅವರಿಗೆ ಕರಡೀಗೌಡ ಸಮಾಜ ಸೇವಾ ಪ್ರಶಸ್ತಿ ಪ್ರಧಾನಿಸಲಾಯಿತು. ತಲಾ 50 ಸಾವಿರ ರೂ. ನಗದು ಪ್ರಶಸ್ತಿ ಫಲಕ ಹೊಂದಿದ್ದ ಪ್ರಶಸ್ತಿಯನ್ನು ನಿವೃತ್ತ ನ್ಯಾಯಧೀಶ ಟಿ.ಜಿ.ಶಿವಶಂಕರೇಗೌಡ ಪ್ರದಾನ ಮಾಡಿದರು.

ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಅಭಿನಂದನಾ ಭಾಷಣ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಕೆ.ಜಗದೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

“ಕೋರ್ಟ್‍ನಿಂದ ಕಾವೇರಿಗೆ ಪರಿಹಾರ ಸಿಗುವುದಿಲ್ಲ. ಬದಲಾಗಿ ರಾಜ್ಯ ಸರಕಾರವು ವಾಸ್ತವ ಪರಿಸ್ಥಿತಿ ಅರಿಯಲು ತಜ್ಞರ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಲು ಅರ್ಜಿ ಸಲ್ಲಿಸಬೇಕು. ಆಗ ಮಾತ್ರ ರಾಜ್ಯಕ್ಕೆ ನ್ಯಾಯ ಸಿಗುತ್ತದೆ. ಇನ್ನು ರಾಜಕಾರಣ ಇಂದು ವೃತ್ತಿಯಾಗಿ ಪರಿವರ್ತನೆಯಾಗಿದೆ. ಸಂಬಳ, ಸವಲತ್ತು ಸೇರಿದಂತೆ ಕೈತುಂಬಾ ಹಣ ಬರುತ್ತದೆ. ಹಾಗಾಗಿ ನಿವೃತ್ತ ಅಧಿಕಾರಿಗಳು ಸೇರಿದಂತೆ ಎಲ್ಲರೂ ರಾಜಕಾರಣಕ್ಕೆ ಬರುತ್ತಿದ್ದಾರೆ. ಜನರು ಪ್ರಜ್ಞಾವಂತರಾಗಬೇಕು. ಸೇವೆಯನ್ನು ಗುರಿಯಾಗಿಸಿಕೊಂಡವರನ್ನು ಗೆಲ್ಲಿಸಬೇಕು.”

-ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News