ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ : ಮತ್ತೊಂದು ಆಡಿಯೊ ಸದ್ದು..!
ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಆರೋಪ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ವಕೀಲ ದೇವರಾಜೇಗೌಡ ನಡುವಿನ ದೂರವಾಣಿ ಸಂಭಾಷಣೆ ಎನ್ನಲಾದ ಮತ್ತೊಂದು ಆಡಿಯೊ ವೈರಲ್ ಆಗಿದೆ.
ರವಿವಾರ ಈ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮೊದಲು ದೇವರಾಜೇಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಎನ್ನಲಾದವರು ದೂರವಾಣಿಯಲ್ಲಿ ಮಾತನಾಡಿದ್ದಾರೆ. ಜತೆಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆಡಿಯೊದಲ್ಲಿ ಏನಿದೆ?: ಆಡಿಯೊ ಪ್ರಕಾರ, ‘ನಾನು ಫೋನ್‍ಅನ್ನು ಡಿ.ಕೆ.ಶಿವಕುಮಾರ್ ಅವರಿಗೆ ಕೊಡುತ್ತೇನೆ. ಏನೇನಾಗಿದೆ ಎಲ್ಲದರ ಕುರಿತು ಮಾಹಿತಿ ಕೊಡು ಎಂಬುದಾಗಿ ಶಿವರಾಮೇಗೌಡ ಅವರು ದೇವರಾಜೇಗೌಡರಿಗೆ ಸೂಚಿಸುತ್ತಾರೆ. ಇದಾದ ಬಳಿಕ ದೇವರಾಜೇಗೌಡ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
‘ಏನೇನಾಯ್ತು? ಏನಿದೆ ಪರಿಸ್ಥಿತಿ’ ಎಂಬುದಾಗಿ ಡಿ.ಕೆ.ಶಿವಕುಮಾರ್ ಕೇಳುತ್ತಾರೆ. ಆಗ ದೇವರಾಜೇಗೌಡ ಅವರು, ‘ಸದ್ಯದ ಪರಿಸ್ಥಿತಿಯಲ್ಲಿ ನಾಳೆ ಕೋರ್ಟ್‍ನಲ್ಲಿ ತಡೆಯಾಜ್ಞೆ ಆಗುವ ಸಾಧ್ಯತೆ ಇದೆ. ಸರಿಯಾಗಿ ದೂರು ಕೊಟ್ಟಿಲ್ಲ. ಮಹಿಳೆ ನೀಡಿರುವ ಹೇಳಿಕೆ ಹಾಗೂ ನಡೆದಿರುವ ಘಟನೆ ಮಧ್ಯೆ ಹಲವು ವ್ಯತ್ಯಾಸ ಇದೆ.
ಆದರೆ, ಸಿಟ್ ನವರು ಮಹಿಳೆಯನ್ನು ಕರೆದುಕೊಂಡು ಹೋಗಿ ವಿಚಾರಣೆ, ತನಿಖೆ ನಡೆಸಿದರೆ ಗಂಭೀರ ಪ್ರಕರಣ ಆಗುತ್ತದೆ ಎಂದಿದ್ದಾರೆ. ಇದಾದ ಬಳಿಕ ಡಿ.ಕೆ.ಶಿವಕುಮಾರ್ ಎನ್ನಲಾದವರು ಏನಾದರೂ ಬೇರೆ ಸಾಕ್ಷ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಆಗ, ದೇವರಾಜೇಗೌಡ ಅವರು ಯಾವುದೇ ಸಾಕ್ಷ್ಯ ಇಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಆಡಿಯೊದಲ್ಲಿ ಶಿವರಾಮೇಗೌಡ ಹಾಗೂ ದೇವರಾಜೇಗೌಡ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ನೀವು ಡಿಕೆ ಅವರ ಜೊತೆ ಕೈಜೋಡಿಸಿದರೆ ಸಹಾಯ ಮಾಡುತ್ತಾರೆ. ನಿಮಗೆ ಯಾವ ರೀತಿ ಬೇಕು ಹಾಗೇ ನೋಡಿಕೊಳ್ಳುತ್ತಾರೆ. ಅಲ್ಲದೆ, ವಿಡಿಯೊ ಕುಮಾರಸ್ವಾಮಿಯೇ ಬಿಟ್ಟಿರಬೇಕೆಂದು ಹೇಳಿ, ಕುಮಾರಸ್ವಾಮಿಗೆ ಮಗ ಮುಂದಕ್ಕೆ ಬರಬೇಕೆಂದು ಆಸೆ ಇದೆ. ಪ್ರಜ್ವಲ್ ಮುಂದಕ್ಕೆ ಬಂದ ಬಿಟ್ಟ ಅದಕ್ಕೆ ಹೀಗೆ ಮಾಡಿದ್ದಾರೆ ಎಂದು ದೂರಿ ಎಂದು ಎಲ್.ಆರ್. ಶಿವರಾಮೇಗೌಡ ಎನ್ನಲಾದ ವ್ಯಕ್ತಿ ಹೇಳಿದ್ದಾರೆ.
ಮುಂದುವರೆದು, ‘ದೇವೇಗೌಡ ಮಕ್ಕಳು, ಓಹೋ ಕಡಿಮೆ ಎಂದು ತಿಳಿದುಕೊಳ್ಳಬೇಡ. ದೇವೇಗೌಡ ಇನ್ನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವಲ್ಲ. ಕೇಳಣ್ಣ, ಕೇಳಣ್ಣ ಇಲ್ಲಿ, ಇನ್ನೇನು ವಿಡಿಯೊಗಳಿದೆ. ಏನೂ ತಲೆನೇ ಕೆಡಿಸಿಕೊಳ್ಳಬೇಡಿ, ಅವರನ್ನು ಬಲಿ ಹಾಕಲು ಸರಕಾರ ತೀರ್ಮಾನ ಮಾಡಿದೆ. ಅರ್ಥ ಆಯಿತಾ’ ಎಂದು ಶಿವರಾಮೇಗೌಡ ಎನ್ನಲಾದ ವ್ಯಕ್ತಿ ಹೇಳುತ್ತಾರೆ.