ಬೆಂಗಳೂರಿನಲ್ಲಿ 400 ಮಿಲಿಯನ್‌ ಡಾಲರ್‌ ಹೂಡಿದ AMD: ಕೇಂದ್ರವನ್ನು ಶ್ಲಾಘಿಸಿದ ತೇಜಸ್ವಿ ಸೂರ್ಯಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

Update: 2023-07-29 18:48 GMT

ಪ್ರಿಯಾಂಕ್‌ ಖರ್ಗೆ / ತೇಜಸ್ವಿ ಸೂರ್ಯ

ಬೆಂಗಳೂರು: ಅಮೇರಿಕಾ ಮೂಲದ ಚಿಪ್‌ ಸೆಟ್‌ ತಯಾರಿಕಾ ಕಂಪೆನಿ AMD ಬೆಂಗಳೂರಿನಲ್ಲಿ 400 ಮಿಲಿಯನ್‌ ಡಾಲರ್‌ ಹೂಡಿಕೆ ಮಾಡುವ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರವನ್ನು ಶ್ಲಾಘಿಸಿ ಹಾಕಿರುವ ಟ್ವೀಟ್‌ಗೆ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.

“ಭವಿಷ್ಯವನ್ನು ರೂಪಿಸುವ ಬಗ್ಗೆ ಕೇಂದ್ರ ಸರ್ಕಾರದ ನೀತಿಗಳನ್ನು ಅರ್ಥಮಾಡಿಕೊಳ್ಳಲಾಗದವರಿಗೆ ಬೆಂಗಳೂರಿನಲ್ಲಿ AMD 400 ಮಿಲಿಯನ್‌ ಡಾಲರ್‌ಗಳ ಹೂಡಿಕೆ ಮಾಡುವುದು ಉತ್ತಮ ಜ್ಞಾಪನೆಯಾಗಲಿದೆ. ಈ ವರ್ಷದಿಂದ, AMD ಬೆಂಗಳೂರಿನಲ್ಲಿ ಹೊಸ ವಿನ್ಯಾಸ ಕೇಂದ್ರವನ್ನು ಸ್ಥಾಪಿಸುತ್ತದೆ, ಇದು ನಮ್ಮ ಜನರಿಗೆ 3,000 ಉದ್ಯೋಗಗಳನ್ನು ಒದಗಿಸುತ್ತದೆ. ಬಿಜೆಪಿ ಸರ್ಕಾರದ ಸಮರ್ಥ ನೀತಿಗಳಿಂದ ಬೆಂಗಳೂರಿನಂತಹ ನಗರಗಳು ಅಪಾರ ಪ್ರಯೋಜನ ಪಡೆಯುತ್ತಿವೆ.” ಎಂದು ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಖರ್ಗೆ, “ಗುಜರಾತ್‌ನಲ್ಲಿ ಪ್ರಧಾನ ಮಂತ್ರಿಯವರ ಸಮ್ಮುಖದಲ್ಲಿ ನಮ್ಮ ಬೆಂಗಳೂರಿನಲ್ಲಿ ಅತಿದೊಡ್ಡ ವಿನ್ಯಾಸ ಕೇಂದ್ರವನ್ನು ಸ್ಥಾಪಿಸಲು AMD 400 ಮಿಲಿಯನ್‌ ಡಾಲರ್ ಹೂಡಿಕೆ ಮಾಡಲು ಘೋಷಿಸಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಇದು ನಮ್ಮ ರಾಜ್ಯವು ಕ್ರಮೇಣವಾಗಿ ಚೇತರಿಸಿಕೊಳ್ಳುವ ಮಾನವ ಸಂಪನ್ಮೂಲಕ್ಕೆ ಸಾಕ್ಷಿಯಾಗಿದೆ. ಕೆಲವೇ ತಿಂಗಳುಗಳ ಹಿಂದೆ ನಮ್ಮ ನೆರೆಯ ರಾಜ್ಯಗಳು ನಮ್ಮ ಸ್ಟಾರ್ಟ್‌ಅಪ್‌ಗಳು ಮತ್ತು ಹೂಡಿಕೆದಾರರನ್ನು ಉತ್ತಮ ಮೂಲಸೌಕರ್ಯವನ್ನು ಉಲ್ಲೇಖಿಸಿ ತಮ್ಮ ರಾಜ್ಯಗಳಿಗೆ ಬರುವಂತೆ ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು, ಇದು ಬಿಜೆಪಿಗೆ ನಮ್ಮ ಕರ್ನಾಟಕ ಮಾದರಿಯ ಸೌಹಾರ್ದತೆ, ಒಳಗೊಳ್ಳುವಿಕೆ ಮತ್ತು ಪ್ರಗತಿಪರ ನೀತಿಗಳ ಅಭಿವೃದ್ಧಿಯನ್ನು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಟಾಂಗ್‌ ನೀಡಿದ್ದಾರೆ.

ಕಳೆದ ವರ್ಷ ತೆಲಂಗಾಣದ ರಾಜಕಾರಣಿಗಳು ಬೆಂಗಳೂರಿನ ಕೋಮು ವಿಭಜಕ ವಾತಾವರಣ ಹಾಗೂ ಮೂಲ ಸೌಕರ್ಯ ಕೊರತೆಯನ್ನು ಉಲ್ಲೇಖಿಸಿ ನಗರದ ಸಂಸ್ಥೆಗಳನ್ನು ಹೈದರಾಬಾದ್‌ಗೆ ಆಹ್ವಾನಿಸಿದ್ದನ್ನು ಖರ್ಗೆ ಉಲ್ಲೇಖಿಸಿ ಬಿಜೆಪಿ ಹಾಗೂ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News