ಮಹಿಷ ದಸರಾ ಆಚರಣೆಗೆ ನಮ್ಮ ವಿರೋಧ ಇಲ್ಲ : ಸಂಸದ ಯದುವೀರ್ ಒಡೆಯರ್
ಮೈಸೂರು : ಮಹಿಷ ದಸರಾ ಆಚರಣೆ ಮಾಡಲು ಸಂವಿಧಾನದಲ್ಲೇ ಅವಕಾಶವಿದೆ. ಮಹಿಷ ದಸರಾ ಆಚರಣೆಗೆ ನಮ್ಮ ವಿರೋಧ ಇಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯಾವುದೇ ಆಚರಣೆಗೆ ಸಂವಿಧಾನದಲ್ಲೇ ಅವಕಾಶ ಇದೆ. ಹಾಗಾಗಿ ಮಹಿಷ ದಸರಾ ಆಚರಣೆ ಮಾಡಿದರೆ ನನ್ನ ವಿರೋಧ ಇಲ್ಲ. ನಾನೊಬ್ಬ ಜನಪ್ರತಿನಿಧಿ, ಇದರ ಆಚರಣೆ ಅವರ ಹಕ್ಕು, ಇದನ್ನು ಯಾರು ವಿರೋಧ ಮಾಡುತ್ತಾರೊ ಅವರನ್ನೇ ಕೇಳಿ"ಎಂದರು.
"ಮಹಿಷ ದಸರಾ ಸಾರ್ವಜನಿಕವಾಗಿ ಅಥವಾ ಅವರ ಮನೆಗಳಲ್ಲೂ ಆಚರಣೆ ಮಾಡಬಹುದು. ಚಾಮುಂಡಿ ಬೆಟ್ಟದಲ್ಲಿ ದಸರಾ ಆಚರಣೆ ಇರುವುದರಿಂದ ಅಲ್ಲಿ ಬೇಡ ಎನ್ನಲಾಗುತ್ತಿದೆ. ಆಲ್ಲಿಯೇ ಮಾಡುತ್ತೇವೆ ಎಂದರೆ ಇದರ ಬಗ್ಗೆ ಚರ್ಚಿಸುತ್ತೇನೆ" ಎಂದು ಹೇಳಿದರು.
ದಸರಾ ಉದ್ಘಾಟನೆ ಹಂ.ಪ.ನಾಗೆ ಸ್ವಾಗತ :
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರಿಗೆ ಆಹ್ವಾನ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಂಸದ ಯದುವೀರ್ ಹೇಳಿದರು.
ಮುನಿರತ್ನ ವಿಚಾರದಲ್ಲಿ ಬಿಜೆಪಿಗೆ ಮುಜುಗರ:
ಮುನಿರತ್ನ ಅವರ ಮೇಲೆ ಪ್ರಕರಣ ದಾಖಲಾಗಿರುವುದರಿಂದ ಬಿಜೆಪಿ ಪಕ್ಷಕ್ಕೆ ಸ್ವಲ್ಪ ಮುಜುಗರ ಆಗಿದೆ. ಮುನಿರತ್ನ ಅವರ ಮೇಲೆ ಬೆದರಿಕೆ, ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ಜೊತೆಗೆ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಕುರಿತ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ವರದಿ ಬಂದ ನಂತರ ತಪ್ಪಿತಸ್ಥರೊ ಇಲ್ಲವೊ ತಿಳಿಯಲಿದೆ ಎಂದರು.