ಮಳೆ ಹಾನಿ | ಎಲ್ಲ ಜಿಲ್ಲಾಧಿಕಾರಿಗಳಿಗೆ ಹೈ-ಅಲರ್ಟ್ ಸೂಚನೆ: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು, ಜು.24: ಮುಂದಿನ ನಾಲ್ಕು ದಿನಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂಬ ಮನ್ಸೂಚನೆ ಇದೆ. ಹಾಗಾಗಿ, ಸ್ಥಳೀಯ ಪರಿಸ್ಥಿತಿಗಳನ್ನು ಗಮನಿಸಿ ಜನ-ಜೀವನ, ಆಸ್ತಿ-ಪಾಸ್ತಿಗಳಿಗೆ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಹೈ-ಅಲರ್ಟ್ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ವಾಡಿಕೆಗಿಂತ ಈಗಾಗಲೇ ಅಧಿಕ ಮಳೆಯಾಗಿದೆ. ಅಲ್ಲದೆ, ಮುಂದಿನ ನಾಲ್ಕು ದಿನಗಳಲ್ಲಿ ಬೀದರ್, ಕಲಬುರ್ಗಿ, ಯಾದಗಿರಿ ಬಿಜಾಪುರ ಭಾಗದಲ್ಲಿ ತೀವ್ರ ಮಳೆಯಾಗಲಿದೆ ಎಂಬ ಸೂಚನೆ ಇದೆ. ಮತ್ತೊಂದೆಡೆ ಮಹಾರಾಷ್ಟ್ರದ ಉಜಿನಿ ಅಣೆಕಟ್ಟೆಯಿಂದ ಇನ್ನೂ ನೀರು ಬಿಡುಗಡೆಯಾಗಿಲ್ಲ. ಅಲ್ಲಿ ನೀರು ಬಿಡುಗಡೆಯಾದರೆ, ಭೀಮಾ ನದಿಪಾತ್ರ ವಿಕೋಪಕ್ಕೆ ತಿರುಗಲಿದೆ. ಜನವಸತಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಸೂಕ್ಷ್ಮ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇನ್ನೂ, ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಜೂನ್ ತಿಂಗಳಲ್ಲಿ ರಾಜ್ಯಕ್ಕೆ ಮಳೆ ಶೇ.56ರಷ್ಟು ಕೊರತೆಯಾಗಿತ್ತು. ಆದರೆ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಹೀಗಾಗಿ ಮಳೆ ಕೊರತೆಯ ಪ್ರಮಾಣ ಶೇ.56 ರಿಂದ ಶೇ.14ಕ್ಕೆ ಇಳಿದಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.80 ರಷ್ಟು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಉತ್ತರ ಒಳನಾಡು ಭಾಗಗಳಲ್ಲಿ ಒಂದು ವಾರದ ಅವಧಿಯಲ್ಲಿ ವಾಡಿಕೆಗಿಂತ ಶೇ.170 ರಷ್ಟು ಅಧಿಕ ಮಳೆ: ಉತ್ತರ ಒಳನಾಡು ಭಾಗಗಳಲ್ಲಿ ಒಂದು ವಾರದ ಅವಧಿಯಲ್ಲಿ ವಾಡಿಕೆಗಿಂತ ಶೇ.170 ರಷ್ಟು ಅಧಿಕ ಮಳೆಯಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಶೇ.300, ಯಾದಗಿರಿ ಶೇ.160, ಬೀದರ್ ಶೇ.155, ಬೆಳಗಾವಿಯಲ್ಲಿ ಶೇ.186, ಬಾಗಲಕೋಟೆ ಶೇ.174, ವಿಜಯಪುರ ಶೇ.185 ಹಾಗೂ ಗದಗ ಜಿಲ್ಲೆಯಲ್ಲಿ ಶೇ.166 ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.
ಬರ ಮಾನದಂಡ ಬದಲಿಸಲು ಕೇಂದ್ರಕ್ಕೆ ಪತ್ರ: ರಾಜ್ಯದ 85 ತಾಲೂಕುಗಳಲ್ಲಿ ಶೇ.20ರಷ್ಟು ಮಳೆ ಕೊರತೆಯಾಗಿದೆ. ಈ ತಾಲೂಕುಗಳಲ್ಲಿ ಬರ ಘೋಷಣೆ ಸಂಬಂಧ ಚಿಂತನೆ ನಡೆಸಲಾಗುತ್ತಿದೆ. ಆದರೆ, ಕೇಂದ್ರದ ‘ಬರ ಮಾನದಂಡ’ ಕಠಿಣವಾಗಿದ್ದು, ಇದನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಹೇಳಿದರು.
2016ರಲ್ಲಿ ಕೇಂದ್ರ ಸರಕಾರದ ‘ಬರ ಮಾನದಂಡ’ ಬದಲಾಗಿದೆ. ಅದಕ್ಕೂ ಮುನ್ನ ಶೇ.20 ರಷ್ಟು ಮಳೆ ಕೊರತೆಯಾಗಿದ್ದರೂ ‘ಬರ’ ಎಂದು ಪರಿಗಣಿಸಲಾಗಿತ್ತು. ಆದರೆ, ಈಗ ಬರ ಘೋಷಣೆಗೆ ಶೇ.60ರಷ್ಟು ಮಳೆ ಕೊರತೆಯಾಗಿರಬೇಕು. ಅಲ್ಲದೆ, ಸತತ ಮೂರು ವಾರಗಳ ಕಾಲ ಮಳೆಯಾಗಿರಬಾರದು ಎಂಬ ಮಾನದಂಡವನ್ನು ನೀಡಲಾಗಿದೆ.
ಆದರೆ, ಇತ್ತೀಚೆಗೆ ಹವಾಮಾನ ಸಾಕಷ್ಟು ಬದಲಾಗಿದೆ. ಮೂರು ವಾರ ಮಳೆ ಬರದಂತಹ ಹಾಗೂ ಮೂರು ವಾರದ ಮಳೆ ಒಂದೇ ದಿನ ಸುರಿಯುವಂತಹ ಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾದಲ್ಲಿ ಕೇಂದ್ರ ಸರಕಾರ ಮಾನದಂಡದ ಪ್ರಕಾರ ‘ಬರ’ ಘೋಷಣೆ ಸಾಧ್ಯವಿಲ್ಲ. ಆದರೆ, ಇಂತಹ ಪರಿಸ್ಥಿತಿಯಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ‘ಬರ’ ಘೋಷಣೆ ಮಾನದಂಡ ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಬರೆದು ಒತ್ತಾಯಿಸಿದ್ದಾರೆ ಎಂದು ಅವರು ವಿವರಿಸಿದರು.