‘ಅಧಿವೇಶನ’ ಭೋಜನದ ಬಳಿಕ ಕಿರು ನಿದ್ರೆಗೆ ಜಾರುವ ಶಾಸಕರಿಗೆ ʼರಿಕ್ಲೈನರ್ ಚೇರ್ʼ ವ್ಯವಸ್ಥೆಗೆ ಚಿಂತನೆ: ಸ್ಪೀಕರ್ ಯು.ಟಿ.ಖಾದರ್

Update: 2025-02-24 21:46 IST
‘ಅಧಿವೇಶನ’ ಭೋಜನದ ಬಳಿಕ ಕಿರು ನಿದ್ರೆಗೆ ಜಾರುವ ಶಾಸಕರಿಗೆ ʼರಿಕ್ಲೈನರ್ ಚೇರ್ʼ ವ್ಯವಸ್ಥೆಗೆ ಚಿಂತನೆ: ಸ್ಪೀಕರ್ ಯು.ಟಿ.ಖಾದರ್
  • whatsapp icon

ಬೆಂಗಳೂರು: ಮಾ.3ರಿಂದ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳುತ್ತಿದ್ದು, ಈ ನಡುವೆಯೇ ವಿಧಾನಸೌಧದ ಮೊಗಸಾಲೆಯಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕಿರುನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆ ಕಲ್ಪಿಸಲು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮುಂದಾಗಿದ್ದಾರೆ.

ಸೋಮವಾರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ‘ಶಾಸಕರು ಭೋಜನದ ಬಳಿಕ ಕಿರುನಿದ್ರೆ ಮಾಡಲು ಹೊರಗೆ ಹೋಗುವುದನ್ನು ತಪ್ಪಿಸಲು ವಿಶ್ರಾಂತಿಗಾಗಿ ವಿಧಾನಸಭೆಯ ಮೊಗಸಾಲೆಯಲ್ಲೇ ರಿಕ್ಲೈನರ್ ಚೇರ್‍ಗಳ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಿದ್ದು, ಜಂಟಿ ಹಾಗೂ ಬಜೆಟ್ ಅಧಿವೇಶನ ಸಮಯದಲ್ಲಿ ಸುಮಾರು 15 ರಿಕ್ಲೈನರ್ ಚೇರ್‍ಗಳನ್ನು ಬಾಡಿಗೆಗೆ ತರಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ರಿಕ್ಲೈನರ್ ಚೇರ್‍ಗಳನ್ನು ಖರೀದಿ ಮಾಡುವುದಿಲ್ಲ. ಯಾಕೆಂದರೆ ವರ್ಷಪೂರ್ತಿ ಅಧಿವೇಶನ ನಡೆಯುವುದಿಲ್ಲ. ವಿಧಾನಸೌಧದಲ್ಲಿ ವರ್ಷಕ್ಕೆ ಕೇವಲ 30 ದಿನಗಳ ಕಲಾಪ ನಡೆಯುತ್ತವೆ. ಹೀಗಾಗಿ, ಖರೀದಿ ಮಾಡುವ ಬದಲು ರಿಕ್ಲೈನರ್ ಕುರ್ಚಿಗಳನ್ನು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗುವುದು. ಸದನ ಮುಗಿದ ಬಳಿಕ ಅವುಗಳನ್ನು ಹಿಂತಿರುಗಿಸಲಾಗುವುದು. ಶಾಸಕರು ಸದನಕ್ಕೆ ಹಾಜರಾಗಲು ಈಗಾಗಲೇ ಹಲವು ಸುಧಾರಣೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತೆಯೇ ಇದು ಒಂದಾಗಿದ್ದು, ಇದರಿಂದ ಸದನದಲ್ಲಿ ಶಾಸಕರು ಹಾಜರಾಗುವ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

ಈ ಹಿಂದಿನ ಎರಡ್ಮೂರು ಅಧಿವೇಶನಗಳಿಂದ ಕಲಾಪದಲ್ಲಿ ಶಾಸಕರ ಹಾಜರಾತಿ ಹೆಚ್ಚಳಕ್ಕೆ ಹಾಗೂ ಬೆಳಗ್ಗೆ ಬೇಗ ಕಲಾಪಕ್ಕೆ ಆಗಮಿಸಲು ಅನುವಾಗುವಂತೆ ಸ್ಪೀಕರ್ ಯು.ಟಿ.ಖಾದರ್ ಶಾಸಕರಿಗೆ ವಿಧಾನಸೌಧದಲ್ಲೇ ಉಚಿತವಾಗಿ ಬೆಳಗ್ಗೆ 9ಗಂಟೆಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಮೂಲಕ ಶಾಸಕರು ಹೊರಗಡೆ ಉಪಹಾರ ಮಾಡಿ ಕಲಾಪಕ್ಕೆ ತಡವಾಗಿ ಬರುವುದನ್ನು ತಪ್ಪಿಸಲು ಹಾಗೂ ಮಧ್ಯಾಹ್ನ ಭೋಜನಕ್ಕೆ ಹೊರಗಡೆ ಹೋಗಿ ಬಳಿಕ ಕಲಾಪಕ್ಕೆ ಗೈರಾಗುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News