‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ’ ಜಾರಿಗೊಳಿಸುವಂತೆ ಸಿಎಂಗೆ ಮನವಿ

Update: 2024-10-24 14:57 GMT

ಬೆಂಗಳೂರು : ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಕಾಂತರಾಜು ಸಮೀಕ್ಷಾ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ ಮನವಿ ಮಾಡಿದೆ.

ಗುರುವಾರ ನಗರದ ಶಾಸಕರ ಭವನದಲ್ಲಿ ಎಸ್‍ಸಿ-ಎಸ್‍ಟಿ, ಅಲೆಮಾರಿ ಸಮುದಾಯಗಳು, ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಸೇರಿ ನಡೆಸಿದ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮೀಸಲಾತಿಯ ಪ್ರಮಾಣವನ್ನು ಶೇ.75ಕ್ಕೆ ವಿಸ್ತರಿಸಬೇಕು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮೀಸಲಾತಿ ನೀತಿ ಜಾರಿಗೆ ತರಬೇಕು. ವಿಧಾನಸಭೆ, ಲೋಕಸಭೆ, ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಪರಿಶಿಷ್ಟರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ, ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಕೋರಲಾಗಿದೆ.

ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೆ ತರಲು ಕಾನೂನು ರೂಪಿಸಬೇಕು. ಕೇಂದ್ರದ ಬ್ಯಾಕ್‍ಲಾಗ್ ಹುದ್ದೆಗಳು, ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಹಿಂದುಳಿದವರಿಗೂ ಬ್ಯಾಕ್‍ಲಾಗ್ ಹುದ್ದೆ ಭರ್ತಿ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಲಾಗಿದೆ.

ನವಂಬರ್ ತಿಂಗಳ ಮೊದಲ ವಾರದ ಒಳಗೆ ಕಾಂತರಾಜು ಆಯೋಗದ ಸಮೀಕ್ಷಾ ವರದಿ ಜಾರಿಗೊಳಿಸದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟವನ್ನು ಮಾಡುತ್ತೇವೆ ಎಂದು ಒಕ್ಕೂಟ ಇದೇ ವೇಳೆ ಎಚ್ಚರಿಕೆ ನೀಡಿದೆ.

ಸಭೆಯಲ್ಲಿ ಒಕ್ಕೂಟದ ಮಾವಳ್ಳಿ ಶಂಕರ್, ಅನಂತನಾಯಕ್, ಎಣ್ಣೆಗೆರೆ ವೆಂಕಟರಾಮಯ್ಯ, ಎನ್. ವೆಂಕಟೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕೆ.ಎಸ್.ಮೃತ್ಯುಂಜಯಪ್ಪ, ಯೂಸುಫ್ ಖನ್ನಿ, ಎಂ.ಈರಣ್ಣ, ಡಾ.ರವಿ ಮಾಕಳಿ, ಎಂ.ವಿ.ಸೋಮಶೇಖರ್, ಜೆ.ಡಿ.ಗೋಪಾಲ್, ಆದರ್ಶ ಯಲ್ಲಪ್ಪ, ಡಾ.ರಾಜೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

‘ಎರಡು ಸಮುದಾಯಗಳು ಮಾತ್ರ ಒಳಮೀಸಲಾತಿ ಜಾರಿಮಾಡಬಾರದು ಎಂದು ಹೇಳುತ್ತಿದ್ದಾರೆ. ನಾವು ಎಲ್ಲ ಷಡ್ಯಂತ್ರಗಳನ್ನು ಮೆಟ್ಟಿನಿಂತು ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕು. ಸಿದ್ದರಾಮಯ್ಯನವರೇ ನಿಮಗೆ ನಾವು ಅಧಿಕಾರ ಕೊಟ್ಟಿದ್ದೇವೆ. ನೀವು ನಮ್ಮ ಪರವಾಗಿ ಕೆಲಸ ಮಾಡಿ, ಕಾಂತರಾಜು ವರದಿ ಜಾರಿ ಮಾಡಿ. ಸಂವಿಧಾನ ಉಳಿಸಿಕೊಳ್ಳಬೇಕೆಂದರೆ ನಾವೆಲ್ಲ ಐಕ್ಯತೆಯಿಂದ ಇರಬೇಕಾಗಿದೆ’

-ಅನಂತ ನಾಯಕ್, ವಕೀಲ

‘ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸುವುದಾಗಿ ಹೇಳಿತ್ತು. ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆ ಮಾಡಿ ‘ನಾವು ನಡೆದಂತೆ ನಡೆಯುವವರು’ ಎನ್ನುವುದನ್ನು ಸಾಬೀತು ಮಾಡಬೇಕು. ಸರಕಾರ ವರದಿ ಮಂಡಿಸಿದ ನಂತರ ಆಕ್ಷೇಪ ಸಲ್ಲಿಸಲು ಒಪ್ಪಬೇಕೋ-ಬೇಡವೋ ಎಂಬುದನ್ನು ನಿರ್ಧರಿಸುವುದು ಸಂಪುಟ ಸಭೆ/ಶಾಸನ ಸಭೆಯ ಅಧಿಕಾರ. ಆದರೆ ಸಂಪುಟ ಸಭೆಯಲ್ಲಿ ಮಂಡಿಸಲೇಬಾರದು ಎಂಬುದು ಗೂಂಡಾ ಪ್ರವೃತ್ತಿ ಮತ್ತು ಸರ್ವಾಧಿಕಾರಿ ಧೋರಣೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಸಮಸ್ತ ಎಸ್‍ಸಿ, ಎಸ್‍ಟಿ, ಒಬಿಸಿ ಸಮುದಾಯಗಳು ತಮ್ಮ ಬೆನ್ನಿಗೆ ಇದ್ದೇವೆ. ಸಾಂವಿಧಾನಿಕ ಕ್ರಮ ಜರುಗಿಸಲು ಮುಂದಾಗಬೇಕು’.

-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ಸಂಬಂಧಿಸಿದಂತೆ ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ದ ಮನವಿ ಸ್ವೀಕರಿಸಿದ್ದು, ಮೂರು ಕ್ಷೇತ್ರಗಳ ಉಪಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಸಚಿವ ಸಂಪುಟದಲ್ಲಿ ವರದಿ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News