ಹಿಂಗಾರು ಮಳೆ ಅವಧಿಯಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ : ಕಂದಾಯ ಸಚಿವ ಕೃಷ್ಣ ಬೈರೇಗೌಡ

Update: 2024-11-29 15:12 GMT

ಕೃಷ್ಣ ಬೈರೇಗೌಡ

ಬೆಂಗಳೂರು : ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯಾದ್ಯಂತ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೂ ಪರಿಹಾರ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶುಕ್ರವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಡೇಟಾ ಎಂಟ್ರಿ ಕೆಲಸಗಳೂ ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದರು.

ಸುಮಾರು 120 ಕೋಟಿ ರೂ.ವರೆಗೆ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲೆ 642 ಕೋಟಿ ರೂ. ಲಭ್ಯವಿದ್ದು, ಈ ಹಣದಲ್ಲೇ ಪರಿಹಾರ ಶೀಘ್ರ ವಿತರಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.

ಮುಂಗಾರು ಹಂಗಾಮಿನಲ್ಲಿ ಸುಮಾರು 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಕೆಲವೆಡೆ ಮನೆ ಕುಸಿದಿದ್ದವು, ಕೆಲವೆಡೆ ಪ್ರಾಣ ಹಾನಿಯಂತಹ ಘಟನೆಗಳೂ ಸಂಭವಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಒಟ್ಟಾರೆ 162 ಕೋಟಿ ರೂ.ಗಳನ್ನು ಪರಿಹಾರವಾಗಿ ರೈತರ ಖಾತೆಗಳಿಗೆ ಈಗಾಗಲೇ ಜಮೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಡಿ.15ರೊಳಗೆ 5 ಸಾವಿರ ಜನರಿಗೆ ಸಾಗುವಳಿ ಚೀಟಿ: ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಟ 5 ಸಾವಿರ ಜನರ ಅರ್ಜಿಗಳನ್ನಾದರೂ ‘ಬಗರ್ ಹುಕುಂ’ ಕಮಿಟಿಯ ಎದುರು ಮಂಡಿಸಿ ಡಿ.15ರೊಳಗೆ ಸಾಗುವಳಿ ಚೀಟಿ ನೀಡಲಾಗುವುದು. ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1.26 ಲಕ್ಷ ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕೆಲ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಈಗಾಗಲೇ ಬಗರ್ ಹುಕುಂ ಕಮಿಟಿ ಎದುರು ಇಡಲಾಗಿದೆ. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಗುರಿ ನಿಗದಿಪಡಿಸಲಾಗಿದೆ. ಡಿ.15ರೊಳಗೆ ರಾಜ್ಯಾದ್ಯಂತ ಕನಿಷ್ಟ 5 ಸಾವಿರ ಅರ್ಜಿಗಳನ್ನು ಕಮಿಟಿ ಎದುರು ಮಂಡಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮೊದಲು ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಸ್ಥಳ ಪರಿಶೀಲಿಸಬೇಕು. ತದನಂತರ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಬೇಕು. ಆನಂತರವೆ ಅರ್ಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಲು ಸಾಧ್ಯ. ಅಧಿಕಾರಿಗಳಿಗೆ ಮೊದಲ ಹಂತದಲ್ಲಿ 5 ಸಾವಿರ ಅರ್ಜಿಗಳ ಗುರಿ ನೀಡಿದ್ದು, ಜನವರಿ ವೇಳೆಗೆ ಇದು 15 ರಿಂದ 20 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ಅವರು ತಿಳಿಸಿದರು.

ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರಾಗುವ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಿಂಚಿತ್ತೂ ತಕರಾರು ಬರಬಾರದು, ಕಡತ ಕಳೆದು ಹೋಯ್ತು ಎಂದು ರೈತರು ಮತ್ತೆ ಸರಕಾರಿ ಕಚೇರಿಗೆ ಅಲೆಯಬಾರದು. ಹೀಗಾಗಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಮಂಜೂರಾದ ಜಮೀನಿಗೆ ಪೋಡಿಯೂ ಮಾಡಿಸಿ, ಪಹಣಿಯಲ್ಲಿ ಹೆಸರನ್ನು ನಮೂದಿಸಿ ಸ್ವತಃ ತಹಶೀಲ್ದಾರರು ನೋಂದಣಿ ಕಚೇರಿಯಲ್ಲಿ ಜಮೀನಿನ ನೋಂದಣಿಯೂ ಮಾಡಿ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅನರ್ಹ ಅರ್ಜಿಗಳೆಷ್ಟು?: ಬಗರ್ ಹುಕುಂ ಯೋಜನೆಯ ಅಡಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದವರ ಪೈಕಿ 5 ರಿಂದ 6 ಲಕ್ಷ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗಿದೆ. ಕಾನೂನು ರೀತ್ಯಾ ಅರ್ಜಿ ಸಲ್ಲಿಸಬೇಕಾದ ದಿನಕ್ಕೆ 18 ವರ್ಷ ತುಂಬದ 26,051 ಜನ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

4.38 ಎಕರೆ ಜಮೀನು ಹೊಂದಿರುವ 26,922 ಅರ್ಜಿಗಳು, ಕೆರೆ, ರಸ್ತೆ ಸೇರಿ ಬಿ-ಖರಾಬು ಪ್ರದೇಶಗಳ ಮಂಜೂರಾತಿಗೆ ಕೋರಿ 40,799 ಅರ್ಜಿಗಳು, ಅರಣ್ಯ ಪ್ರದೇಶಗಳ ಮಂಜೂರಾತಿಗೆ 1,68,119 ಅರ್ಜಿಗಳು, ನಗರ ಪರಿಮಿತಿಯೊಳಗೆ ಮಂಜೂರಾತಿ ಕೋರಿ 68,561 ಅರ್ಜಿಗಳು, ತಾಲೂಕಿನಲ್ಲೆ ವಾಸ ಇಲ್ಲದ 8,665 ಅರ್ಜಿಗಳು ಹಾಗೂ ಕೃಷಿಕರಲ್ಲದ 1,00,400 ಜನ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನೂ ಅನರ್ಹ ಎಂದು ಪರಿಗಣಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಅನರ್ಹ ಅರ್ಜಿಗಳನ್ನು ಅಧಿಕಾರಿಗಳ ಮಟ್ಟದಲ್ಲೇ ಪರಿಶೀಲನೆ ವೇಳೆ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಅಧಿಕಾರಿಗಳ ತಪ್ಪಿನಿಂದ ಅರ್ಹ ಅರ್ಜಿಯನ್ನು ವಿಸರ್ಜಿಸಲಾಗಿದ್ದರೆ ಅಂತಹ ಅರ್ಜಿಗಳನ್ನು ಮತ್ತೆ ಮರು ಪರಿಶೀಲನೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News